ಜಿಲ್ಲೆ

ವರದರಾಜ್ ಬಿಜೆಪಿ ತೊರೆದಿಲ್ಲ

ಕೊಳ್ಳೇಗಾಲ: ಪಟ್ಟಣದ ಭೀಮನಗರದ ಮುಖಂಡ ವರದರಾಜ್ ಬಿಜೆಪಿ ತೊರೆದಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದವರ ಪ್ರಚಾರ ಸತ್ಯಕ್ಕೆ ದೂರ ಎಂದು ಶಾಸಕ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಸ್ಪಷ್ಟಪಡಿಸಿದರು.


ಪಟ್ಟಣದ ಆದರ್ಶನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮೂರು ದಿನದ ಹಿಂದೆ ಭೀಮನಗರ ಮುಖಂಡ ವರದರಾಜ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸಿಗರು ಅಪಪ್ರಚಾರ ಮಾಡುತ್ತಿದ್ದರು. ಈ ಮಾಹಿತಿಯು ಪ್ರಚಾರಕ್ಕೆ ಬಂದ ದಿನವೇ ಫೋನ್ ಮೂಲಕ ವರದರಾಜ್ ಸಂಪರ್ಕಿಸಿ ಮಾತನಾಡಿದ್ದೆ. ‘ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ನಡೆಯುವ ವೇಳೆ ಕಾಂಗ್ರೆಸ್ ಮುಖಂಡ ಅಬ್ದುಲ್ ಬಂದಿದ್ದರು. ಈ ವೇಳೆ ಅವರನ್ನು ನೋಡಲು ಹೋಗಿದ್ದಾಗ ನನಗೆ ಕಾಂಗ್ರೆಸ್ ಶಲ್ಯ ಹೊದಿಸಲಾಯಿತು ಅಷ್ಟೆ. ನಾನು ಕಾಂಗ್ರೆಸ್ ಸೇರಿಲ್ಲ. ನಿಮ್ಮೊಂದಿಗೆಯೇ ಇದ್ದೇನೆ ಎಂದು ವರದರಾಜ್ ಪ್ರತಿಕ್ರಿಯಿಸಿದರು’. ಇಂದು ಅವರೇ ಕಾಂಗ್ರೆಸಿಗರ ಅಪಪ್ರಚಾರ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ವರದರಾಜ್ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ವರದರಾಜ್ ಮಾತನಾಡಿ, ಮೂರು ದಿನದ ಹಿಂದೆ ಅಬ್ದುಲ್ ಅವರು ನನಗೆ ಸಹೋದರಂತೆ ಇದ್ದು, ನನ್ನನ್ನು ಊಟಕ್ಕೆ ಆಹ್ವಾನಿಸಿದ್ದರು. ಅವರ ಕರೆಗೆ ಓಗ್ಗೊಟ್ಟು ಸ್ಥಳಕ್ಕೆ ತೆರಳಿದ್ದೆ. ಪಟ್ಟಣದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅಬ್ದುಲ್ ಅವರು ಕಾಂಗ್ರೆಸ್ ಶಲ್ಯವನ್ನು ನನ್ನ ಹೆಗಲಿಗೆ ಹಾಕಿದರು. ಅಲ್ಲಿ ಫೋಟೋ ಅನ್ನು ತೆಗೆಸಿಕೊಂಡೆ. ತಕ್ಷಣವೇ ಅವರಿಗೆ ನಾನು ಬಿಜೆಪಿಯಲ್ಲಿದ್ದೇನೆ ಅಣ್ಣ, ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳಿದ್ದೆ. ನನಗೆ ಶಾಸಕ ಎನ್.ಮಹೇಶ್ ಸಹಾಯ ಮಾಡಿದ್ದಾರೆ. ಆದ್ದರಿಂದ ಅವರಿಗೆ ನನ್ನ ಮತವನ್ನು ಹಾಕುತ್ತೇನೆ. ಅವರೊಂದಿಗೆ ಸದಾ ಇರುತ್ತೇನೆ. ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಪಪಡಿಸಿರುವುದಾಗಿ ತಿಳಿಸಿದರು.


ಬಿಜೆಪಿ ಮುಖಂಡರಾದ ರೋಹಿತ್, ಜಾಕಿ ಸುರೇಶ್, ಸಿದ್ದರಾಜು ಕೆಂಪನಪಾಳ್ಯ ಇದ್ದರು.