ಜಿಲ್ಲೆ

ವರದಕ್ಷಿಣೆಗಾಗಿ ಕೊಲೆ ಮಾಡಿದ ಪತಿಗೆ 7 ವರ್ಷ ಜೈಲು

ಕಲಬುರಗಿ: ವರದಕ್ಷಿಣೆಗಾಗಿ ಪತ್ನಿಯನ್ನು ಕೊಲೆ ಮಾಡಿದ ಆರೋಪಿ ಫರಹತಾಬಾದ್‌ನ ಶರಣಪ್ಪ ತಳವಾರನಿಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು ೨೫ ಸಾವಿರ ರೂ. ದಂಡ ವಿಧಿಸಿ ೫ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಆದೇಶಿಸಿದ್ದಾರೆ. ಅಫಜಲಪುರ ತಾಲೂಕಿನ ಅವರಳ್ಳಿ ಗ್ರಾಮದ ಭಾಗ್ಯಶ್ರೀ ಅವರನ್ನು ಫರಹತಾಬಾದ್ ಗ್ರಾಮದ ಶರಣಪ್ಪ ತಳವಾರನು ಮದುವೆಯಾಗಿದ್ದ. ೨೦೧೮ ಜನವರಿ ೧೮ರಂದು ಭಾಗ್ಯಶ್ರೀಗೆ ಪತಿ ಶರಣಪ್ಪ, ಅತ್ತೆ, ನಾದಿನಿಯರು ಸೇರಿ ಕಿರುಕುಳ ನೀಡಿ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದಾರೆ. ನಾಯಿಯ ಕಾರಣಕ್ಕೆ ಜಗಳ ತೆಗೆದು, ಹಲ್ಲೆ ಮಾಡಿದ್ದಾರೆ. ಜ.೧೯ರಂದು ಭಾಗ್ಯಶ್ರೀ ಕಾಣೆಯಾಗಿದ್ದಳು. ಈ ಕುರಿತು ಭಾಗ್ಯಶ್ರೀ ತಂದೆ ಶಿವರಾಜ ಫರಹತಾಬಾದ್ ಠಾಣೆಗೆ ೧೦ ಜನರ ವಿರುದ್ಧ ಕೊಲೆ ಆರೋಪ ಮಾಡಿ, ದೂರು ನೀಡಿದ್ದರು. ಈ ಕುರಿತು ತನಿಖಾಧಿಕಾರಿಗಳಾದ ಲೋಕೇಶ ಬಿ.ಜೆ, ಅಕ್ಷಯ ಹಾಕೆ, ಎಸ್.ಎಸ್.ಹುಲ್ಲೂರ, ಎಸ್.ಪವನಂದಿ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಪತಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಉಳಿದ ೨ರಿಂದ ೧೦ರವರೆಗಿನ ಆರೋಪಿಗಳನ್ನು ಖುಲಾಸೆಗೊಳಿಸಿ, ತೀರ್ಪು ನೀಡಿದ್ದಾರೆ. ರಾಜ್ಯ ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಬಳಬಟ್ಟಿ ವಾದಿಸಿದ್ದರು.