ಜಿಲ್ಲೆ

ವರದಕ್ಷಿಣೆ ಕಿರುಕುಳ ನೀಡಿದ್ದವನಿಗೆ 3 ವರ್ಷ ಜೈಲು

ಪಾಂಡವಪುರ: ವರದಕ್ಷಿಣಿ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣನಾದ ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಶ್ರೀರಂಗಪಟ್ಟಣದ ಮೂರನೇ ಸತ್ರ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಕೃಷ್ಣ ರೈ ತೀರ್ಪು ಪ್ರಕಟಿಸಿದ್ದಾರೆ.


ತಾಲೂಕಿನ ಕುಂಬಾರಕೊಪ್ಪಲು ಗ್ರಾಮದ ನಿವಾಸಿ ಶ್ಯಾಮ್ ಶಿಕ್ಷೆಗೆ ಗುರಿಯಾದ ಅಪರಾಧಿ. ಮೇಲುಕೋಟೆ ಹೋಬಳಿ ಬೋರಾಪುರ ಗ್ರಾಮದ ರಂಜಿತಾ ಎಂಬುವವರನ್ನು ಶ್ಯಾಮ್‌ಗೆ 2015ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದ ಆರು ತಿಂಗಳ ಅವಧಿಯಲ್ಲಿ ಗರ್ಭಿಣಿಯಾದ ಪತ್ನಿಗೆ ಹೊಟ್ಟೆಯಲ್ಲಿರುವ ಭ್ರೂಣವನ್ನು ತೆಗೆಸುವಂತೆ ಪೀಡಿಸುತ್ತಿದ್ದ. ಇಲ್ಲವಾದರೆ ವಿಷ ಉಣಿಸಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಸುಟ್ಟ ಗಾಯಗಳಿಂದ ಮಂಡ್ಯದ ಮಿಮ್ಸ್ ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.


ಆಗಿನ ತಹಸೀಲ್ದಾರ್ ಮುಂದೆ ಆಕೆ ನೀಡಲಾದ ಹೇಳಿಕೆ ಆಧಾರದ ಮೇಲೆ ಮೇಲುಕೋಟೆ ಪೊಲೀಸರು ದೂರು ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಅಪರಾಧಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಆರೋಪಿಯ ವಿರುದ್ಧ ಅಂದಿನ ತನಿಖಾಧಿಕಾರಿಗಳಾದ ಡಿವೈಎಸ್‌ಪಿ ವಿಶ್ವನಾಥ್ ತನಿಖೆ ನಡೆಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭೀಯೋಜಕಿ ಪ್ರಫುಲ್ಲಾ ವಾದ ಮಂಡಿದರು.