ಜಿಲ್ಲೆ

ವರದಕ್ಷಿಣೆ ಕಿರುಕುಳ: ಗರ್ಭಿಣಿ ಆತ್ಮಹತ್ಯೆ

Hassan - Ramesh H R

ಅರಸೀಕೆರೆ: ಪತಿ ಮತ್ತು ಅವರ ಕುಟುಂಬದರು ನೀಡಿದವರು ನೀಡಿದ ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಂಕೀಹಳ್ಳಿ ಗ್ರಾಮದಲ್ಲಿ ನಡೆದಿದೆ.ಅಭಿಲಾಷಾ ಮೃತ ದುರ್ದೈವಿ.

ಜಾವಗಲ್ ಹೋಬಳಿ ಸಂಕೀಹಳ್ಳಿ ಗ್ರಾಮದ ಬಿಲ್ಲಯ್ಯ ಎಂಬುವರ ಮಗಳಾದ ಅಭಿಲಾಷಾ ಅವರನ್ನು 2 ವರ್ಷದ ಹಿಂದೆ ತುರುವೇಕೆರೆಯ ಚಂದ್ರಯ್ಯ ಎಂಬುವರ ಮಗ ನಾಗೇಶನೊಂದಿಗೆ ಮದುವೆ ಮಾಡಿಕೊಡಲಾಗಿತ್ತು.

ಮದುವೆ ಸಮಯದಲ್ಲಿ ನಾಗೇಶನಿಗೆ 1 ಲಕ್ಷ ನಗದು ಮತ್ತು 1 ಲಕ್ಷ ರೂ ಬೆಲೆಯ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.ಅಭಿಲಾಷಾ ಗಂಡನ ಮನೆಗೆ ಹೋದ ನಂತರ ಪತಿ ನಾಗೇಶ ಮತ್ತು ಮಾವ ಚಂದ್ರಯ್ಯ, ಪತಿಯ ಮಾವ ಹನುಮಂತಯ್ಯ ಅವರ ಹೆಂಡತಿ ರಾಧಮ್ಮ ಎಂಬುವರು ನಿಮ್ಮ ಅಪ್ಪನ ಮನೆಯಿಂದ ಇನ್ನಷ್ಟು ವರದಕ್ಷಿಣೆ ತೆಗೆದುಕೊಂಡು ಬರಬೇಕು ಎಂದು ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದರು. ಅಭಿಲಾಷಾ 6 ತಿಂಗಳ ಗರ್ಭಿಣಿಯಾದ್ದರಿಂದ ಅವಳನ್ನು ತವರು ಮನೆಗೆ ಕರೆದುಕೊಂಡು ಬಂದಿದ್ದು, ಹೆರಿಗೆ ನಂತರ ಗಂಡ ಮನೆಗೆ ಬಂದು ನಾನು ಸರ್ಕಾರಿ ಕೆಲಸಕ್ಕೆ ಹೋಗಬೇಕು 3 ಲಕ್ಷ ಹಣ ಕೊಡಿ ಎಂದು ಕೇಳಿದ್ದಾನೆ.

ನಂತರ ಪತ್ನಿಗೆ ನೀನು 3 ಲಕ್ಷ ಹಣವನ್ನು ತೆಗೆದುಕೊಂಡು ಬರುವುದಾದರೆ ನಮ್ಮ ಮನೆಗೆ ಬಾ ಎಂದು ಹೇಳಿ ಹೋಗಿದ್ದ ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದು ಹೋಗಿದ್ದ ಅಭಿಲಾಷಾ ಅ. 12 ರಂದು ಸಂಜೆ 6.45 ರ ಸಮಯದಲ್ಲಿ ಮುಖ ತೊಳೆದುಕೊಂಡು ಬರುವುದಾಗಿ ತಾಯಿಗೆ ಹೇಳಿ ಮನೆಯ ಆರ್‌ಸಿಸಿ ಮೇಲಿರುವ ಬಾತ್ ರೂಂಗೆ ಹೋಗಿ ಸೀರೆಯಿಂದ ಕಬ್ಬಿಣಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಗಳ ಸಾವಿಗೆ ಕಾರಣವಾದ ನಾಗೇಶ, ಚಂದ್ರಯ್ಯ, ಹನುಮಂತಯ್ಯ, ರಾಧಮ್ಮ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮೃತೆ ಅಭಿಲಾಷ ಅವರ ಅಣ್ಣ ನವೀನ್‌ಕುಮಾರ ನೀಡಿದ ದೂರು ಆಧರಿಸಿ ಜಾವಗಲ್ ಪೊಲೀಸರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ಘಟನಾ ಸ್ಥಳಕ್ಕೆ ಅರಸೀಕೆರೆ ಡಿವೈಎಸ್ಪಿ ಲೋಕೇಶ್, ಗಂಡಸಿ ವೃತ್ತದ ಸಿಪಿಐ ರಾಘವೇಂದ್ರ ಪ್ರಕಾಶ್, ಜಾವಗಲ್ ಪಿಎಸ್‌ಐ ಮಂಜುನಾಥ ಎಸ್. ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.