ಕಣದೂರು ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇಗುಲದ ಹೊರ ನೋಟ.  
ಜಿಲ್ಲೆ

ವರ ಕರುಣಿಸುವ ವೀರಭದ್ರೇಶ್ವರಸ್ವಾಮಿ

ಬೇಲೂರು: ಕಷ್ಟ ಎಂದು ಬೇಡಿ ಬರುವ ಭಕ್ತರಿಗೆ ವರ ಕರುಣಿಸುವ ಮೂಲಕ ಕಷ್ಟಗಳನ್ನು ನಿವಾರಿಸಿ ಮನೆ ಮಾತಾಗಿರುವ ಕಣದೂರು ಶ್ರೀ ವೀರಭದ್ರೇಶ್ವರಸ್ವಾಮಿ ಮಲೆನಾಡಿನ ಮಧ್ಯಭಾಗದಲ್ಲಿ ನೆಲೆಸಿರುವುದು ವಿಶೇಷ.

ನಿತ್ಯ ನೂರಾರು ಭಕ್ತರು ಇಲ್ಲಿಗೆ ಆಗಮಿಸಿ ರುದ್ರಾಭಿಷೇಕದೊಂದಿಗೆ ಪೂಜೆ ಸಲ್ಲಿಸಿ ಹೋಗುವುದು ಸಾಮಾನ್ಯ. ತಾಲೂಕಿನ ಅರೇಹಳ್ಳಿ ಹೋಬಳಿ ಕಣದೂರು ಗ್ರಾಮದ ಮಲೆನಾಡ ಹಸಿರಿನ ಮೈಸಿರಿಯಲ್ಲಿ ನೆಲೆಸಿರುವ ವೀರಭದ್ರೇಶ್ವರ ಸ್ವಾಮಿ, ಚೀಕನಹಳ್ಳಿ-ಕಣದೂರು ಭಾಗದ ಹತ್ತಾರು ಗ್ರಾಮಗಳ ಗ್ರಾಮ ದೇವರು.

ದೇವಸ್ಥಾನವು ಬೇಲೂರಿನಿಂದ 14 ಕಿಲೋಮೀಟರ್ ಹಾಗೂ ಮೂಡಿಗೆರೆಯಿಂದ 24 ಕಿಲೋಮೀಟರ್ ದೂರದಲ್ಲಿದೆ. ಬೇಲೂರು- ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಿಂದ ಒಳ ಭಾಗದಲ್ಲಿ ದೇಗುಲವಿದ್ದು ರಸ್ತೆ ಸಂಪರ್ಕವಿದೆ. ಇಲ್ಲಿ ದೇವರಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ನಡೆಯುತ್ತದೆ. ನವರಾತ್ರಿಯ 9 ದಿವಸ ವಿಶೇಷ ಪೂಜೆಯಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ತಪ್ಪದೆ ಪಾಲ್ಗೊಳ್ಳುವುದು ಮತ್ತೊಂದು ವಿಶೇಷ.

ವಿಶೇಷವೆಂದರೆ 500 ವರ್ಷಕ್ಕಿಂತ ಹೆಚ್ಚು ವರ್ಷಗಳ ಇತಿಹಾಸವಿರುವ ದೇಗುಲಕ್ಕೆ ತನ್ನದೇ ಆದ ವೈಶಿಷ್ಟೃತೆ ಇದೆ. ಗ್ರಾಮದವರೊಬ್ಬರು ಸಾಕಿದ್ದ ಹಸು ನಿತ್ಯ ಮೇಯಲು ಹೋಗಿದ್ದ ಸಂದರ್ಭದಲ್ಲಿ ಹಿಂದೆ ಇದ್ದ ಲಿಂಗ ಮುದ್ರೆಕಲ್ಲಿಗೆ ಯಾರಿಗೂ ಕಾಣದಂತೆ ಹಾಲನ್ನು ಹಿಂಡಿ ಬರುತ್ತಿತ್ತು. ಬಳಿಕ ಮನೆಗೆ ಬಂದ ಹಸುವಿನಲ್ಲಿ ಹಾಲು ಕರೆಯಲು ಮಾಲೀಕರು ಮುಂದಾದಾಗ ಅದು ಹಾಲು ಕೊಡುತ್ತಿರಲಿಲ್ಲ. ಇದನ್ನು ಗಮನಿಸಿದ ಮನೆಯವರು ಗ್ರಾಮಸ್ಥರೊಂದಿಗೆ ಚರ್ಚಿಸಿದ್ದಾರೆ. ಬಳಿಕ ಒಂದು ದಿನ ಗ್ರಾಮದವರೆಲ್ಲ ಸೇರಿ ಹಸುವನ್ನು ಹಿಂಬಾಲಿಸಿದಾಗ, ಹಸು ಉದ್ಭವ ಲಿಂಗ ಮುದ್ರೆ ಕಲ್ಲಿಗೆ ಹಾಲುಣಿಸುತ್ತಿರುವುದನ್ನು ಗಮನಿಸಿ ಆಶ್ಚರ್ಯಚಕಿತರಾಗಿದ್ದಾರೆ.

ನಂತರ ಗ್ರಾಮಸ್ಥರು ಈ ವಿಚಾರವನ್ನು ಜ್ಯೋತಿಷಿಗಳಲ್ಲಿ ಕೇಳಿದಾಗ ಅದೇ ಜಾಗದಲ್ಲಿ ದೇವರಿಗಾಗಿ ದೇವಸ್ಥಾನ ನಿರ್ಮಿಸಿ ಪೂಜಿಸಿದರೆ ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಸ್ಥರಿಗೆ ಒಳಿತಾಗುತ್ತದೆ ಎಂಬ ಸಂದೇಶ ನಿಡಿದ್ದಾರೆ. ಬಳಿಕ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಗ್ರಾಮಸ್ಥರು ಉದ್ಭವಲಿಂಗ ಮುದ್ರೆಕಲ್ಲು ಇದ್ದ ಜಾಗದಲ್ಲಿ ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿದರು.

ಹರಕೆ ಹೊತ್ತುಕೊಳ್ಳುವ ಭಕ್ತರು: ದೇಗುಲವಿರುವ ಗ್ರಾಮ ದೊಡ್ಡ ಊರಾಗಿದ್ದು, ಕಣದೂರು ವೀರಭದ್ರೇಶ್ವರಸ್ವಾಮಿ ಎಂದೇ ಪ್ರಸಿದ್ಧಿಯಾಗಿದೆ. ಬೆಳಗ್ಗೆ 9 ರಿಂದ 12 ಗಂಟೆವರೆಗೆ ಪೂಜೆ ನಡೆಯುತ್ತದೆ. ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು ಸಕಲೇಶಪುರ, ಮೂಡಿಗೆರೆ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ದೇಗುಲಕ್ಕೆ ಬಂದು ಹರಕೆ ಹೊತ್ತು ಪೂಜೆ ಸಲ್ಲಿಸುತ್ತಾರೆ. ಸಂಕ್ರಾಂತಿ, ಶಿವರಾತ್ರಿ, ಮಹಾನವಮಿ, ದೀಪಾವಳಿ, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ದೇಗುಲಕ್ಕೆ ಪೂಜೆಗೆ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ಇರಲಿದೆ. ವೀರಭದ್ರ ದೇವರಿಗೆ ಪೂಜೆ ಸಲ್ಲಿಸಲು ಬರುವ ಹೊರ ಭಾಗದ ಕೆಲ ಭಕ್ತರ ಮೈಮೇಲೆ ದೇವರು ಬರುತ್ತದೆ ಎಂಬ ಪ್ರತೀತಿಯೂ ಇದೆ.

ಯಾವುದೇ ಕೆಲಸ ಕಾರ್ಯ ಮಾಡುವ ಮುನ್ನ ಇಷ್ಟಾರ್ಥ ನೆರವೇರಿಸಿಕೊಳ್ಳಲು ದೇವರಲ್ಲಿ ಪ್ರಸಾದ ಕೇಳುವುದು ವಾಡಿಕೆಯಾಗಿದೆ. ಮೊದಲು ಬಂದವರು ಸರತಿಯಲ್ಲಿ ಕುಳಿತು ದೇವರಿಗೆ ಪೂಜೆ ಸಲ್ಲಿಸಿದ ನಂತರ ಬೇರೆಯವರಿಗೆ ಅವಕಾಶ. ದೇವರಲ್ಲಿ ಇಷ್ಟಾರ್ಥ ಕೇಳಿದಾಗ ದೇವರ ಮೂರ್ತಿಗೆ ಮುಡಿಸಿದ ಪುಷ್ಪ ಎಡ ಅಥವಾ ಬಲಕ್ಕೆ ಪ್ರಸಾದವಾಗಿ ಬೀಳುತ್ತದೆ.

ದೇವಸ್ಥಾನದ ಹಿಂಭಾಗದ ಎಡ ಭಾಗದಲ್ಲಿ ಚೌಡೇಶ್ವರಿ ದೇವಿ ಇದ್ದು, ವೀರಭದ್ರಸ್ವಾಮಿಗೆ ಬಂಟನಾಗಿ ಈರಣ್ಣ ನೆಲೆಸಿದ್ದಾನೆ. ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಗರುಡೋತ್ಸವ ಹಾಗೂ ದಿವ್ಯ ರಥೋತ್ಸವ ನಡೆಯಲಿದೆ. ಈ ಸಂದರ್ಭ ದೇಗಲದ ಆಡಳಿತ ಮಂಡಳಿಯಿಂದ ಎರಡು ದಿನ ಅನ್ನದಾಸೋಹವಿರಲಿದೆ.
ಶಿಥಿಲವಾಗಿದ್ದ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು, ಭಕ್ತರಿಗೆ ಎಲ್ಲ ರೀತಿಯಲ್ಲೂ ಅನುಕೂಲ ಕಲ್ಪಿಸುವ ಮೂಲಕ ಸಮಿತಿಯವರು ಉತ್ತಮ ಕೆಲಸ ಮಾಡಿದ್ದಾರೆ.

ಸುಗ್ಗಿ ಮಹೋತ್ಸವ ವಿಶೇಷ; ಶ್ರೀ ಸ್ವಾಮಿಯ ಸುಗ್ಗಿ ಮಹೋತ್ಸವ ಮೂರು ವರ್ಷಕ್ಕೊಮ್ಮೆ ನಡೆಯುವುದು ವಿಶೇಷ. 15 ದಿನ ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರ ಜತೆಗೆ ದೇವರಿಗೆ ವ್ರತ ಆಚರಿಸಿ ಉಪವಾಸ ಇರುತ್ತಾರೆ. ಸುಗ್ಗಿ ಸಂದರ್ಭ ಮನೆ ಕಸವನ್ನು ಲಕ್ಕೆ ಸೊಪ್ಪಿನಿಂದ ಗುಡಿಸುತ್ತಾರೆ. ಕಾಲಿಗೆ ಪಾದರಕ್ಷೆಯನ್ನೂ ಹಾಕುವುದಿಲ್ಲ.

ಇನ್ನು ಅಡುಗೆ ಮಾಡುವಾಗ ಅನ್ನ ಬಸಿಯುವಂತಿಲ್ಲ, ಮದ್ಯ ಸೇವನೆಯಂತೂ ಮಾಡುವಂತಿಲ್ಲ. ಮನೆಗಳಲ್ಲಿ ರೊಟ್ಟಿ ಸುಡಲು ಈ ಸಮಯದಲ್ಲಿ ಅವಕಾಶವಿಲ್ಲ. ಅಲ್ಲದೆ ಮಣೆ ಮತ್ತು ಕುರ್ಚಿಗಳ ಮೇಲೆ ಕುಳಿತು ಕೊಳ್ಳುವಂತ್ತಿಲ್ಲ. ಯಾರಾದರೂ ಇದರ ವಿರುದ್ಧವಾಗಿ ನಡೆದುಕೊಂಡರೆ ಜೇನು ನೊಣಗಳು ಮುತ್ತಿಗೆ ಹಾಕುತ್ತವೆ ಎಂಬುದು ಇಂದಿಗೂ ಚಾಲ್ತಿಯಲ್ಲಿದ್ದು, ಭಕ್ತರು ದೇವರ ಆಶಯದಂತೆ ನಡೆದುಕೊಂಡು ಬರುತ್ತಿದ್ದಾರೆ.

ವಿಶೇಷವಾಗಿ ಸೋಮವಾರ, ಮಂಗಳವಾರ ಹಾಗೂ ಶುಕ್ರವಾರದಂದು ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಅಂದು ರುದ್ರಾಭಿಷೇಕದೊಂದಿಗೆ ಮಹಾಮಂಗಳಾರತಿ ನೆರವೇರಲಿದೆ. ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಲು ದೇವರಲ್ಲಿ ಅಪ್ಪಣೆ ಕೇಳಿ ಕೃತಾರ್ಥರಾಗುತ್ತಾರೆ. ನಿತ್ಯ ಭಕ್ತರ ಅನುಕೂಲಕ್ಕಾಗಿ ಪೂಜೆ ನಡೆಯಲಿದೆ.
ಯುವರಾಜು ಅರ್ಚಕ, ವೀರಭದ್ರೇಶ್ವರ ದೇಗುಲ ಕಣದೂರು.

500 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ವೀರಭದ್ರೇಶ್ವರ ಸ್ವಾಮಿ ಈ ಭಾಗದ ಹತ್ತಾರು ಗ್ರಾಮಗಳ ಆರಾಧ್ಯ ದೈವವಾಗಿದ್ದಾನೆ. ಜತೆಗೆ ನಾಡಿನಾದ್ಯಂತ ತನ್ನದೆ ಭಕ್ತರನ್ನು ಹೊಂದಿದ್ದು, ನಿತ್ಯ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
ವೀರಭದ್ರೇಗೌಡ ಹಿರಿಯ ಭಕ್ತರು, ಕುಪ್ಪಗೋಡು ಬೇಲೂರು ತಾಲೂಕು.