ಜಿಲ್ಲೆ

ವಯಸ್ಸಿನ ಭೇದ ಮೀರಿ ಆವರಿಸುತ್ತಿವೆ ದುಶ್ಚಟಗಳು

ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ದುಶ್ಚಟಗಳ ವ್ಯಾಪ್ತಿ ಎಲ್ಲೆ ಮೀರುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆಯಲ್ಲಿ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ದುಶ್ಚಟವೆಂದರೆ ಕುಡಿತ, ಬೀಡಿ, ಸಿಗರೇಟ್, ಗುಟ್ಖಾ ಸೇವನೆಗೆ ಸೀಮಿತವಾಗಿತ್ತು. ಆದರಿಂದು ದುಶ್ಚಟಗಳ ವ್ಯಾಪ್ತಿ ಎಲ್ಲೆ ಮೀರುತ್ತಿದೆ. ವಯಸ್ಸಿನ ಭೇದವಿಲ್ಲದೆ ಜನರನ್ನು ಆವರಿಸಿಕೊಳ್ಳುತ್ತಿವೆ. ಪ್ರತಿಯೊಬ್ಬರು ಸಂಯಮ ಬೆಳೆಸಿಕೊಂಡು ದುಶ್ಚಟಗಳಿಂದ ದೂರವಿರಬೇಕು ಎಂದರು.
ಯುವಜನರು ಮಾದಕ ವ್ಯಸನಗಳೆಡೆ ಆಕರ್ಷಿತರಾಗುತ್ತಿದ್ದಾರೆ.ವ್ಯಸನಗಳು ಮನುಷ್ಯನ ಆರೋಗ್ಯ ಹಾಳು ಮಾಡುವ ಜತೆಗೆ, ಕುಟುಂಬ, ಸಾಮಾಜಿಕ ವ್ಯವಸ್ಥೆಗೂ ಧಕ್ಕೆ ತರುತ್ತವೆ ಎಂದು ತಿಳಿಸಿದರು.
ಡಾ.ಮಹಾಂತ ಶಿವಯೋಗಿ ಸ್ವಾಮೀಜಿ, ಮಹಾಂತ ಜೋಳಿಗೆ ರೂಪಿಸಿ, ದೇಶ ವಿದೇಶಗಳಲ್ಲಿ ಸಂಚರಿಸಿ ವ್ಯಸನಮುಕ್ತರನ್ನಾಗಿಸಿ ಜನ ಜೀವನ ಹಸನು ಮಾಡಲು ಶ್ರಮಿಸಿದರು ಎಂದು ಸ್ಮರಿಸಿದರು.
ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳ ಜನ್ಮದಿನವನ್ನು (ಆ.1) ರಾಜ್ಯ ಸರ್ಕಾರ ವ್ಯಸನ ಮುಕ್ತ ದಿನವನ್ನಾಗಿ ಘೋಷಿಸಿದೆ ಎಂದು ತಿಳಿಸಿದರು.
ಅಬಕಾರಿ ಇಲಾಖೆ ಮುಖ್ಯ ಪೇದೆ ರಮೇಶ್ ನಾಯ್ಕ ಮಾತನಾಡಿದರು. ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಉಪನ್ಯಾಸ ನೀಡಿದರು. ಅಬಕಾರಿ ನಿರೀಕ್ಷಕಿ ವನಿತಾ ಇತರರಿದ್ದರು.
*ಜಾಗೃತಿ ಜಾಥಾ: ಜಾಗೃತಿ ಜಾಥಾಕ್ಕ್ಕೆ ನಗರದ ಒನಕೆ ಓಬವ್ವ ವೃತ್ತದಲ್ಲಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸಿ ಎಂ.ಕಾರ್ತಿಕ್ ಚಾಲನೆ ನೀಡಿದರು. ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ವ್ಯಸನ ಮುಕ್ತ ಸಮಾಜ ನಿಮಾರ್ಣದ ಪ್ರತಿಜ್ಞಾ ವಿಧಿ ಬೋಧಿಸಿದರು. ಒನಕೆ ಓಬವ್ವ ವೃತ್ತದಿಂದ ಆರಂಭವಾದ ಜಾಥಾ, ಮದಕರಿ ನಾಯಕ, ಅಂಬೇಡ್ಕರ್, ಮಹಾವೀರ ಹಾಗೂ ವಾಸವಿ ವೃತ್ತ ಹಾದು ಓಬವ್ವ ವೃತ್ತದಲ್ಲಿ ಸಂಪನ್ನಗೊಂಡಿತು. ಪಿಆರ್‌ಇಡಿ ಇಲಾಖೆ ಎಇಇ ಹನುಮಂತಪ್ಪ, ರಂಗಕರ್ಮಿ ಕೆಪಿಎಂ ಗಣೇಶಯ್ಯ ಇತರರು ಇದ್ದರು.
ಜಿಲ್ಲಾಡಳಿತ, ಜಿಪಂ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ವಾರ್ತಾ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗುರುಗಳೇ ದಾಸರಾದರೆ ಮಕ್ಕಳ ಗತಿ
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಹಿರಿಯರಲ್ಲಿ ದುಶ್ಚಟಗಳಿದ್ದರೆ ಮಕ್ಕಳಲ್ಲಿ ಅವು ದುಪ್ಪಟ್ಟಾಗುತ್ತವೆ. ಗುರುಗಳೇ ದಾಸರಾದರೆ, ಮಕ್ಕಳಿಗೆ ದುಶ್ಚಟಗಳಿಂದ ದೂರ ಇರಿ ಎಂದು ಹೇಳಲು ಹೇಗೆ ಸಾಧ್ಯ? ಮನೆ ಹಾಗೂ ದೇಶವನ್ನು ವ್ಯಸನ ಮುಕ್ತವಾಗಿಸಲು ಪ್ರತಿಯೊಬ್ಬರು ಪಣ ತೊಡಬೇಕಿದೆ ಎಂದು ಎಡಿಸಿ ಕುಮಾರಸ್ವಮಿ ತಿಳಿಸಿದರು.

ಕೋಟ್
ಯುವ ಜನರು ವ್ಯಸನಗಳಿಗೆ ತುತ್ತಾಗದೆ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕು. ಗಾಂಜಾ, ಹೆರಾಯಿನ್ ಮತ್ತಿತರ ಮಾದಕ ವಸ್ತುಗಳಿಂದ ದೂರವಿರಬೇಕು. ಮಾದಕ ವಸ್ತುಗಳ ಮಾರಾಟದ ಬಗ್ಗೆ ತಿಳಿದರೆ ತಕ್ಷಣವೇ ಅಬಕಾರಿ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.
ವನಿತಾ, ಅಬಕಾರಿ ನಿರೀಕ್ಷಕಿ, ಚಿತ್ರದುರ್ಗ