ಸಂಡೂರು: ಕರಡಿ ಸಸ್ಯಹಾರಿ ಮತ್ತು ಮೃದು ಸ್ವಭಾವದ ಪ್ರಾಣಿಯಾಗಿದ್ದು, ಅರಣ್ಯ ಮತ್ತು ಇತರ ವನ್ಯಜೀವಿ ಸಂತತಿ ಉಳಿಯಲು ಪ್ರಮುಖ ಕಾರಣವಾಗಿದೆ ಎಂದು ಪರಿಸರ ಪ್ರೇಮಿ ಡಾ.ಸಮದ್ ಕೊಟ್ಟೂರು ಅಭಿಪ್ರಾಯಪಟ್ಟರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ವಿಶ್ವ ಕರಡಿ ದಿನಾಚರಣೆ ಕಾರ್ಯಕ್ರಮದಲ್ಲಿ ಬುಧವಾರ ಉಪನ್ಯಾಸ ನೀಡಿದರು. ಜಗತ್ತಿನಲ್ಲಿ ಎಂಟು ರೀತಿಯ ಕರಡಿ ಪ್ರಭೇದಗಳಿವೆ. ಭಾರತದಲ್ಲಿ ಕಂಡುಬರುವ ಕರಡಿಗೆ ಇಂಡಿಯನ್ ಸ್ಲಾಗ್ ಬೇರ್ ಎಂದು ಕರೆಯಲಾಗುತ್ತದೆ. ಗ್ರಾಮೀಣ ಭಾಷೆಯಲ್ಲಿ ಮಬ್ಬು ಕರಡಿ ಎನ್ನುತ್ತಾರೆ. ಜಗತ್ತಿನ ಅತಿ ದೊಡ್ಡ ಕರಡಿ ಹಿಮಾಲಯದಲ್ಲಿ ಕಂಡು ಬರುತ್ತದೆ. ಅದನ್ನು ಪೋಲಾರ್ ಬೇರ್ ಎಂದು ಕರೆಯಲಾಗುತ್ತದೆ ಎಂದರು.
ಅಂತಾರಾಷ್ಟ್ರೀಯ ಕರಡಿ ಸಂಘಟನೆ ಕರಡಿಗಳ ರಕ್ಷಣೆಗೋಸ್ಕರ 1992ರ ಮಾ.23ರಂದು ಕರಡಿಗಳ ದಿನಾಚರಣೆ ಜಾರಿಗೆ ತಂದಿತು. 1972ರ ಅರಣ್ಯ ವನ್ಯಜೀವಿ ಸಂರಕ್ಷಣೆ ಕಾಯ್ದೆ ಜಾರಿಯಾದಾಗಿನಿಂದ ವನ್ಯಜೀವಿಗಳ ರಕ್ಷಣೆ ಆಗುತ್ತಿದೆ. ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ವನ್ಯ ಸಂಕುಲ ಹೆಚ್ಚಿಸಲು ಪ್ರಾಮಾಣಿಕವಾಗಿ ಸಹಾಯ ಹಸ್ತ ನೀಡಬೇಕಾದ ಅವಶ್ಯ ಇದೆ ಎಂದರು.
ವನ್ಯಜೀವಿಗಳ ಮೂಲ ವಾಸಸ್ಥಾನವನ್ನು ನಾವು ಆಕ್ರಮಿಸಿ ಕೊಂಡಿದ್ದೇವೆ. ಕಲ್ಲು ಗಣಿಗಾರಿಕೆ, ಕಾರ್ಖಾನೆ, ರೆಸಾರ್ಟ್‌ಗಳ ನಿರ್ಮಾಣದಿಂದಾಗಿ ಮುಂದಿನ ದಿನಗಳಲ್ಲಿ ಪ್ರಾಣಿ, ಪಕ್ಷಿಗಳು ದೊಡ್ಡ ಪ್ರಮಾಣದ ಆಪತ್ತುಗಳನ್ನು ಎದುರಿಸುವ ಸಂದರ್ಭವನ್ನು ನಾವು ಸೃಷ್ಟಿಸಿದ್ದೇವೆ ಎಂದು ಡಾ.ಸಮದ್ ಕೊಟ್ಟೂರು ತಿಳಿಸಿದರು.
ಖನಿಜ ಸಂಸ್ಕರಣ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ.ಶಶಿಧರ ಮಾತನಾಡಿ, ವನ್ಯಜೀವಿ ಮತ್ತು ಅರಣ್ಯ ರಕ್ಷಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಡಾ.ಸಮದ್ ಕೊಟ್ಟೂರ್ ಅವರ ಪರಿಸರ ಪ್ರೇಮ, ಕರಡಿಗಳ ಬಗ್ಗೆ ನಡೆಸುತ್ತಿರುವ ಸಂಶೋಧನೆ, ಅವರ ಹೋರಾಟ ಮಾದರಿಯಾಗಿವೆ ಎಂದರು. ಈ ಭೂಮಿ ಸಕಲ ಜೀವಿಗಳಿಗೂ ಸೇರಿದೆ ಎಂಬದನ್ನು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿಗಳಾದ ಸೈಯದ್ ದಾದಾ ಕಲಂದರ್, ಬಿ.ಎಸ್.ಮಂಜುನಾಥ್, ಡಾ.ಕೆ.ಜಿ.ಸುಮಾ, ಉಪನ್ಯಾಸಕರಾದ ಲಕ್ಷ್ಮಣ್ ತೋಳ್ಸಿ, ಡಾ.ಜಿ.ಹನುಮಂತ, ಡಾ.ಶಂಕರ್‌ಗಿರಿ ದಳವಾಯಿ, ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮ ರಾಗಿ, ಪಾಪಯ್ಯ, ಡಿಆರ್‌ಎಫ್‌ಒ ಆರ್.ತಿಪ್ಪೇಸ್ವಾಮಿ, ಪ್ರಶಾಂತ್ ಕುಮಾರ್, ಇಮಾಮ್ ಸಾಬ್, ಸಿಬ್ಬಂದಿ ಇದ್ದರು.