ಹನೂರು: ಕಾಡಂಚಿನ ಪ್ರದೇಶ, ಗ್ರಾಮಗಳಲ್ಲಿ ವನ್ಯಜೀವಿಗಳು ಹಾಗೂ ಜಾನುವಾರುಗಳ ಹತ್ಯೆ ನಡೆಯದಂತೆ ಕಟ್ಟುನಿಟ್ಟಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವ ಕೆ. ವೆಂಕಟೇಶ್ ನಿರ್ದೇಶನ ನೀಡಿದರು.
ಇತ್ತೀಚೆಗೆ ಮಲೆ ಮಹದೆಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ಮಿಣ್ಯಂ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಹುಲಿಗಳ ಸಾವು ಹಾಗೂ ಗುಂಡ್ಲುಪೇಟೆ ವಲಯದ ಕಂದೇಗಾಲ ಭಾಗದಲ್ಲಿ ಕೋತಿಗಳ ಮರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರ ಪಡೆದರು.
ಹುಲಿಗಳ ಸಾವಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕೇಂದ್ರ ಹಾಗೂ ರಾಜ್ಯಮಟ್ಟದ ಅಧಿಕಾರಿಗಳ ತನಿಖಾ ತಂಡದ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡು ತನಿಖೆಯು ಯಾವ ಹಂತದಲ್ಲಿದೆ ಎಂಬ ಬಗ್ಗೆಯೂ ಅರಣ್ಯ ಅಧಿಕಾರಿಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ವಿವರ ಪಡೆದರು.
ಅರಣ್ಯದಂಚಿನ ಗ್ರಾಮಗಳಲ್ಲಿ ಜಾನುವಾರುಗಳ ಸಂರಕ್ಷಣೆಗೆ ಅರಣ್ಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ವನ್ಯಜೀವಿಗಳು ಆಹಾರ ಅರಸಿ ಗ್ರಾಮಗಳಿಗೆ ಬಾರದಂತೆ ಅರಣ್ಯದಲ್ಲೇ ಸೂಕ್ತ ಆಹಾರ, ನೀರು ಒದಗಿಸುವ ಕಾರ್ಯವನ್ನು ತುರ್ತಾಗಿ ಮಾಡಬೇಕು. ಜಾನುವಾರುಗಳಿಗೆ ಕಾಡು ಸಮೀಪದ ಗ್ರಾಮಗಳಲ್ಲೇ ನರೇಗಾ ಯೋಜನೆಯಡಿ ಮೇವು ಬೆಳೆಸಿ, ಕೆರೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ಸ್ಥಳೀಯ ಭಾಗದ ಜಾನುವಾರುಗಳಿಗೆ ಮೇವು, ನೀರು ಕೊರತೆಯಾಗಬಾರದು ಎಂದು ಸಚಿವರು ಸೂಚನೆ ನೀಡಿದರು.
ಅರಣ್ಯ ಹಾಗೂ ಇದರ ಸಮೀಪದ ಗ್ರಾಮಗಳಲ್ಲಿ ಗಸ್ತು ಹೆಚ್ಚಿಸಬೇಕು. ರಾತ್ರಿಯ ವೇಳೆಯಲ್ಲೂ ವಿಶೇಷ ಗಸ್ತು ವ್ಯವಸ್ಥೆ ಇರಬೇಕು. ವಾಚರ್‌ಗಳು, ರಣ್ಯ ಸಿಬ್ಬಂದಿಯನ್ನು ನಿಯೋಜಿಸಿ ಅರಣ್ಯ ಅಧಿಕಾರಿಗಳು ಮೇಲುಸ್ತುವಾರಿ ಮಾಡಿದರೆ ಪ್ರಾಣಿಗಳ ಉಪಟಳ ತಪ್ಪಿಸಬಹುದಾಗಿದೆ. ವನ್ಯಜೀವಿಗಳು ಜಾನುವಾರು ಮೇಲೆ ದಾಳಿ ಮಾಡಿದಾಗ ರೈತರನ್ನು, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಂತ್ವನ ಹೇಳಬೇಕು. ಜಾನುವಾರುಗಳ ರಕ್ಷಣೆಗೆ ಶೀಘ್ರ ಸ್ಪಂದಿಸಿ ಮಾಹಿತಿ ತಿಳುವಳಿಕೆ ನೀಡಬೇಕಿದೆ ಎಂದರು.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೊರಗುತ್ತಿಗೆ ವಾಚರ್ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವುದು ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿದೆ. ಈ ವಿಷಯದಲ್ಲಿ ನಿರ್ಲಕ್ಷೃವಹಿಸದೆ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಬೇಕು. ಅರಣ್ಯ ಇಲಾಖೆ ವಿಶೇಷವಾಗಿ ಕಾಡಂಚಿನ ಭಾಗಗಳ ಪ್ರಾಣಿಗಳು, ಜನ ಜಾನುವಾರುಗಳಿಗೆ ಸೂಕ್ತ ರಕ್ಷಣೆ, ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಅನುದಾನದ ನೆರವು ಮಂಜೂರು ಮಾಡಿಸಲು ಕ್ರಮ ತೆಗೆದುಕೊಳ್ಳಲಾಗುವುದೆಂದು ಸಚಿವರು ತಿಳಿಸಿದರು.
ಶಾಸಕ ಎಂ.ಆರ್. ಮಂಜುನಾಥ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕ ಆರ್. ನರೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೊಷ್ ಕುಮಾರ್, ಬಂಡೀಪುರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ಹನೂರು ವಲಯದ ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮಾಪತಿ, ಹೆಚ್ಚುವರಿ ಪ್ರಭಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೋಹರ್ ಸ್ವಪ್ನಿಲ್, ತಹಸೀಲ್ದಾರ್ ಗುರುಪ್ರಸಾದ್ ಹಾಗೂ ಇನ್ನಿತರರು ಇದ್ದರು