.ಸರಗೂರು ತಾಲೂಕಿನ ಮೊಳೆಯೂರು ಅರಣ್ಯ ವಲಯ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ ಸಿ.ಚಂದನ್‌ಗೌಡ ಅವರು ಅರಣ್ಯಾಧಿಕಾರಿಗಳಾದ ರಮೇಶ್ ಕುಮಾರ್, ಪರಮೇಶ್ ಜತೆ ಮಾತುಕತೆ ನಡೆಸಿದರು. ಹೇಮಂತ್ ಗೌಡ, ಮೂರ್ತಿ ಕೋಟೆ, ಹರೀಶ್.ಪಿ.ಗೌಡ ಇದ್ದರು.  
ಜಿಲ್ಲೆ

ವನ್ಯಜೀವಿಗಳಿಗೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ

ಸರಗೂರು: ತಾಲೂಕಿನ ಮೊಳೆಯೂರು ಅರಣ್ಯ ವಲಯದ ಕಾಡಂಚಿನ ಭಾಗದ ಗ್ರಾಮಗಳಲ್ಲಿ ವನ್ಯಜೀವಿಗಳಿಗೆ ರೈತರು ಹಾಗೂ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಸಿ.ಚಂದನ್‌ಗೌಡ ಹೇಳಿದರು.

ಮೊಳೆಯೂರು ಅರಣ್ಯ ವಲಯ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ ಬುಧವಾರ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ವನ್ಯಜೀವಿಗಳಿಂದ ಆಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಕಾಡಂಚಿನ ಜನರು ಭಯದಿಂದಲೇ ಜೀವನ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಕಾಡು ಪ್ರಾಣಿಗಳ ದಾಳಿಗೆ ಜನ, ಜಾನುವಾರುಗಳು ಬಲಿಯಾಗುತ್ತಿವೆ. ಇಲ್ಲಿನ ರೈತರು ಬೆಳೆದ ಬೆಳೆಗಳು ಪ್ರಾಣಿಗಳ ಹಾವಳಿಯಿಂದಾಗಿ ನಷ್ಟಗೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದಕ್ಕೆಲ್ಲ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ನಿಟ್ಡಿನಲ್ಲಿ ಸರ್ಕಾರ ಹಾಗೂ ಅರಣ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಮತ್ತಷ್ಟು ಬಿಗಿ ಕ್ರಮ: ಮನವಿಗೆ ಸ್ಪಂದಿಸಿ ಮಾತನಾಡಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್, ಕಾಡುಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷ ತಡೆಯಲು ಈಗಾಗಲೇ ಅರಣ್ಯ ಇಲಾಖೆಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಕಾಡಂಚಿನ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು.

ಹೆಡಿಯಾಲ ವಲಯ ಅರಣ್ಯಾಧಿಕಾರಿ ಪರಮೇಶ್, ರೈತ ಕಲ್ಯಾಣ ಸಂಘದ ರಾಜ್ಯ ಗೌರವಾಧ್ಯಕ್ಷ ಹೇಮಂತ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಮೂರ್ತಿ ಕೋಟೆ, ಪತ್ರಿಕಾ ಕಾರ್ಯದರ್ಶಿ ಹರೀಶ್ ಪಿ.ಗೌಡ, ರಾಜ್ಯ ಸಹ ಕಾರ್ಯದರ್ಶಿ ಕಂದಸ್ವಾಮಿ, ರಾಜ್ಯ ಯುವ ಘಟಕದ ಅಧ್ಯಕ್ಷ ಅಭಿಷೇಕ್, ಜಿಲ್ಲಾ ಸಂಚಾಲಕ ಸಂಜಯ್ಗೌಡ, ಕೆಂಪರಾಜು, ಮಧು, ನಂದೀಶ್, ಮಹೇಶ್, ಮುತ್ತಿಗೆಹುಂಡಿ ಬಸವಣ್ಣ, ಮಟಕೆರಿ ಜೀತೇಂದ್ರ, ಸ್ವಾಮಿ, ಹರೀಶ್, ಮಂಜು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.