ಮೈಸೂರು: ಪ್ಲಾಸ್ಟಿಕ್ ತ್ಯಾಜ್ಯ ಪರಿಸರ ಮತ್ತು ವನ್ಯಜೀವಿಗಳಿಗೆ ಕಂಟಕವಾಗಿ ಕಾಡುತ್ತಿದೆ ಎಂದು ಮೈಸೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಬಸವರಾಜ ಕಳವಳ ವ್ಯಕ್ತಪಡಿಸಿದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮೈಸೂರು ಘಟಕ ಮತ್ತು ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಗರದಲ್ಲಿ ವಿಶ್ವ ಪರಿಸರ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಳೆದ ತಿಂಗಳು ಚಾಮುಂಡಿಬೆಟ್ಟದ ಸುತ್ತಮುತ್ತ ಪ್ಲಾಸ್ಲಿಕ್ ಮುಕ್ತ ಅಭಿಯಾನ ನಡೆಸಿದಾಗ ಅಂದಾಜು 40 ಲೋಡ್ ಪ್ಲಾಸ್ಟಿಕ್ ದೊರೆತಿದೆ. ಪರಿಸರ ಹಾಗೂ ಜೀವಿಗಳ ಪ್ರಾಣಗಳಿಗೆ ಪ್ಲಾಸ್ಟಿಕ್ ಸಂಚಕಾರ ತಂದಿರುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಬಳಕೆಯನ್ನು ತಡೆಯಲಾಗುತ್ತಿಲ್ಲ ಎಂದರು.
16 ವರ್ಷಗಳಲ್ಲಿ ರಣಹದ್ದುಗಳ ಸಂಖ್ಯೆ ಶೇ.95ರಿಂದ 98ರಷ್ಟು ಕಡಿಮೆಯಾಗಿದೆ. ಇದೇ ಸಂದರ್ಭದಲ್ಲಿ ನಾಯಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿದೆ. ನಾಯಿಗಳಿಂದ ಹಬ್ಬುವ ರೇಬಿಸ್ ರೋಗ ಅಧಿಕವಾಗಿದೆ. ದೇಶದಲ್ಲಿ 1300 ಕೋಟಿ ರೂ.ಗಳನ್ನು ರೇಬಿಸ್ ರೋಗ ನಿಯಂತ್ರಣಕ್ಕೆ ಖರ್ಚು ಮಾಡಲಾಗುತ್ತಿದೆ ಎಂದರು.
ಅಳಿವಿನತ್ತ ಸಾಗಿರುವ ರಣಹದ್ದುಗಳ ಜಾಗವನ್ನು ನಾಯಿಗಳು ತುಂಬುತ್ತಿವೆ. ಹೆಚ್ಚುತ್ತಿರುವ ನಾಯಿಗಳನ್ನು ತಿನ್ನಲು ಚಿರತೆಗಳು ನಾಡಿಗೆ ಬರುತ್ತಿವೆ. ಪರಿಸರದಲ್ಲಿ ಆಗುವ ಸಣ್ಣ ಬದಲಾವಣೆ ಮನುಷ್ಯನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದರು.
ಬಿಎಐ ಮೈಸೂರು ಘಟಕದ ಚೇರ್ಮನ್ ನಾಗರಾಜ ವಿ.ಬೈರಿ ಮಾತನಾಡಿದರು. ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, ಸಂಘಟನೆಯ ಮುಖಂಡರಾದ ಕೆ.ಎಸ್.ಬಾಲಾಜಿ, ಎ.ಎಸ್.ಯೋಗಾನರಸಿಂಹ, ವಿ.ಗುರುದತ್, ಎನ್.ಪಿ.ವಿಶ್ವನಾಥ್ ಇನ್ನಿತರರಿದ್ದರು.