ನಾಗರಹೊಳೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಬೆಂಕಿ ನಂದಿಸುವ ಕುರಿತು ಅಗ್ನಿಶಾಮಕ ದಳ ಸಿಬ್ಬಂದಿ ಪ್ರಾತ್ಯಕ್ಷಿಕೆ ನೀಡಿದರು. 
ಜಿಲ್ಲೆ

ವನ್ಯಜೀವಿಗಳ ಜೀವ ರಕ್ಷಣೆಗೂ ಆದ್ಯತೆ ನೀಡಿ

ಹನಗೋಡು: ಅರಣ್ಯದಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಂದೊಮ್ಮೆ ಸಂಭವಿಸಿದಲ್ಲಿ ಅರಣ್ಯ ಸಿಬ್ಬಂದಿ ಅಗ್ನಿ ಶಾಮಕದಳ ನೀಡುವ ಸಲಹೆಗಳನ್ನು ಪಾಲಿಸಬೇಕು ಎಂದು ಪಿರಿಯಾಪಟ್ಟಣ ಅಗ್ನಿಶಾಮಕ ಠಾಣಾಧಿಕಾರಿ ಅಜಯ್ ಕುಮಾರ್ ಸಲಹೆ ನೀಡಿದರು.

ಕಾಳ್ಗಿಚ್ಚಿನಿಂದ ಅರಣ್ಯ-ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಲ್ಲಳ್ಳ ಹಾಗೂ ನಾಗರಹೊಳೆ ವಲಯದಲ್ಲಿ ಅರಣ್ಯ ಸಿಬ್ಬಂದಿಗೆ ಮಂಗಳವಾರ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು. ಬೆಂಕಿ ನಂದಿಸಲು ಆಧುನಿಕ ಉಪಕರಣಗಳಿದ್ದು, ಅವುಗಳನ್ನು ಕ್ರಮವಾಗಿ ಬಳಸಬೇಕು. ಬೆಂಕಿ ನಂದಿಸುವ ವೇಳೆ ವನ್ಯಜೀವಿಗಳ ಜೀವ ರಕ್ಷಣೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ನಾಗರಹೊಳೆ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ.ಗೋಪಾಲ್ ಮಾತನಾಡಿ, ಬೆಂಕಿ ಅವಘಡಗಳನ್ನು ತಡೆಯಲು ನಾಗರಹೊಳೆ ಉಪವಿಭಾಗದಲ್ಲಿ ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ನಾಗರಹೊಳೆ ವಲಯದ ಆರ್‌ಎಫ್‌ಒ ಮಹಮ್ಮದ್ ಜೀಷಾನ್ ಮಾತನಾಡಿ, ವಲಯದಲ್ಲಿ ಈಗಾಗಲೇ ಬೆಂಕಿರೇಖೆ ನಿರ್ವಹಣೆ ಕೈಗೊಳ್ಳಲಾಗಿದೆ ಎಂದರು.
ಕಲ್ಲಳ್ಳ ವಲಯದ ವಲಯಅರಣ್ಯಾಧಿಕಾರಿ ರಾಜಶೇಖರ್ ಮಾತನಾಡಿದರು. ಗೋಣಿಕೊಪ್ಪ ಅಗ್ನಿಶಾಮಕ ಠಾಣಾ ವತಿಯಿಂದ ಬೆಂಕಿ ನಂದಿಸುವ ಸಾಕ್ಷೃಚಿತ್ರ ಪ್ರದರ್ಶಿಸಲಾಯಿತು.
ನಾಗರಹೊಳೆ, ಕಲ್ಲಹಳ್ಳ ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು, ಅರಣ್ಯ ವೀಕ್ಷಕರು ಹಾಗೂ ಕ್ಯಾಂಪ್ ಸಿಬ್ಬಂದಿ ಬಾಗವಹಿಸಿದ್ದರು.