ಜಿಲ್ಲೆ

ವನವಾಸಿ ಕಲ್ಯಾಣ ಸಂಸ್ಥೆ ಕಾರ್ಯ ಶ್ಲಾಘನೀಯ

ರಿಪ್ಪನ್​ಪೇಟೆ: ವನವಾಸಿಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವನವಾಸಿ ಕಲ್ಯಾಣ ಸಂಸ್ಥೆ ಹಗಲಿರುಳು ದೂರದೂರದ ಹಳ್ಳಿಗಳಿಗೆ ತೆರಳಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸಮೀಪದ ಹೊಂಬುಜ ಶ್ರೀಜೈನಮಠದಲ್ಲಿ ಆಯೋಜಿಸಿದ್ದ ವನವಾಸಿಗಳ ಕಲ್ಯಾಣ ಪ್ರಾಂತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಗರಗಳಲ್ಲಿರುವ ನಾವು ವನವಾಸಿ ಹಾಗೂ ವನವಾಸಿ ಕಲ್ಯಾಣದ ಜತೆ ಕೈಜೋಡಿಸಬೇಕಿದೆ. ಈ ಮೊದಲು ನಾನು ಕೂಡ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿರುವ ವನವಾಸಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸ್ಥಿತಿಗತಿಗಳ ಬಗ್ಗೆ ಹತ್ತಿರದಿಂದ ನೋಡಿದ್ದೇನೆ ಎಂದರು.

ವನವಾಸಿ ಕಲ್ಯಾಣ ಸಂಸ್ಥೆಯ ಕೃಷ್ಣಮೂರ್ತಿ ಮಾತನಾಡಿ, ವನವಾಸಿ ಕಲ್ಯಾಣ ದೂರದೂರದ ವನವಾಸಿ ಗ್ರಾಮಗಳಿಗೆ ಹೋಗಿ ಅವರನ್ನು ಜಾಗೃತಗೊಳಿಸುವ, ಸಂಘಟಿಸುವ ಕಾರ್ಯದಲ್ಲಿ ನಿರತವಾಗಿದೆ. ರಾಜ್ಯದ 16 ಜಿಲ್ಲೆಗಳ 963 ಗ್ರಾಮಗಳಲ್ಲಿ ನಮ್ಮ ಕಾರ್ಯ ನಡೆಯುತ್ತಿದೆ ಎಂದರು. ಕುಮುದಾ, ಮೈಸೂರಿನ ಪುಟ್ಟಮ್ಮ, ಮಹೇಶ, ಶಾಂತರಾಮ ಸಿದ್ಧಿ, ವೆಂಕಟೇಶ ಸಾಗರ, ಶ್ರೀಪಾದ, ಶ್ರೀನಿವಾಸ್ ಇತರರಿದ್ದರು.