ದಾಬಸ್‌ಪೇಟೆ: ಸೋಂಪುರ ಹೋಬಳಿಯ ಎಡೇಹಳ್ಳಿಯ ಸರ್ವೇ ನಂ.61ರಲ್ಲಿರುವ ಗೋಮಾಳದಲ್ಲಿ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಅವರು ನಿರ್ಮಿಸಿದ್ದ 4 ಶೆಡ್‌ಗಳನ್ನು ಕಂದಾಯ ಅದಿಕಾರಿಗಳು ಗುರುವಾರ ತೆರವುಗೊಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ.
ವನಕಲ್ಲು ಮಠದ ಟ್ರಸ್ಟ್‌ನವರು ಗೋಮಾಳದಲ್ಲಿ 2 ವರ್ಷಗಳ ಹಿಂದೆ ನಾಲ್ಕು ಶೆಡ್‌ಗಳನ್ನು ಅಕ್ರಮವಾಗಿ ನಿರ್ಮಿಸಿದ್ದರು. ಇದನ್ನು ಅಕ್ರಮ ಸಕ್ರಮದಡಿ ಸಕ್ರಮಗೊಳಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಜಿಲ್ಲಾಧಿಕಾರಿ ಅವರು ಈ ಅರ್ಜಿಯನ್ನು ಮಾನ್ಯ ಮಾಡದ ಹಿನ್ನೆಲೆಯಲ್ಲಿ ಅವನ್ನು ಕೆಡವಲಾಗಿದೆ. ಈ ಹಿಂದೆ ಇದೇ ಗೋಮಾಳದಲ್ಲಿ ಕಟಲಾಗಿದ್ದ 48 ಮನೆಗಳನ್ನೂ ಕೆಡವಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಅವರು, ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಟ್ರಸ್ಟ್ 2014-15ರಲ್ಲಿ ಕಟ್ಟಡಗಳನ್ನು ಸಕ್ರಮ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಶೈಕ್ಷಣಿಕ ಮತ್ತು ಸಾಮಾಜಿಕ ಕಾರಣಕ್ಕಾಗಿ ಸಕ್ರಮ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಇದೇ ಸರ್ವೇ ನಂಬರ್‌ನಲ್ಲಿ ಇನ್ನೂ ಅನೇಕ ಕಾರ್ಖಾನೆಗಳು ಒತ್ತುವರಿ ಮಾಡಿಕೊಂಡಿದ್ದರೂ, ಅದನ್ನು ಪ್ರಶ್ನಿಸದೆ ಶ್ಯೆಕ್ಷಣಿಕ ಉದ್ಧೇಶಕ್ಕಾಗಿ ಕಟ್ಟಿದ ಕಟ್ಟಡವನ್ನು ಕಡೆವಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ವಿರುದ್ಧ ದೂರು: ಮಠದ ಟ್ರಸ್ಟ್ ನಿರ್ಮಿಸಿದ್ದ ಕಟ್ಟಡವನ್ನು ಅಕ್ರಮ ಎಂದು ಹೇಳಿ ಕೆಡವಿದ ಎಡೇಹಳ್ಳಿಯ ಗ್ರಾಮ ಸಹಾಯಕ ಮಂಜುನಾಥ್, ಗ್ರಾಮ ಲೆಕ್ಕಿಗೆ ಬಸವಲಿಂಗಪ್ಪ, ರಾಜಸ್ವ ನಿರೀಕ್ಷಕ ಕುಮಾರಸ್ವಾಮಿ, ಉಪತಹಸೀಲ್ದಾರ್ ಶ್ವೇತಾ ಅವರ ವಿರುದ್ಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಸ್ವಾಮೀಜಿ ತಿಳಿಸಿದರು.
ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಗೋಮಾಳದಲ್ಲಿ ಕಟ್ಟಿದ್ದ ಕಟ್ಟಡಗಳನ್ನು ತೆರವುಗೊಳಿಸಿದ್ದೇವೆ. ಇದು ಯಾರ ಸ್ವಂತ ಜಾಗ ಅಲ್ಲ. 2 ವರ್ಷಗಳ ಹಿಂದೆ ಇದೇ ಜಾಗದಲ್ಲಿ ನಿರ್ಮಿಸಿದ್ದ 48 ಮನೆಗಳನ್ನೂ ಕೆಡವಲಾಗಿದೆ. ಸರ್ಕಾರದ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿಕೊಂಡರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೆ. ಮಂಜುನಾಥ್, ತಹಸೀಲ್ದಾರ್