ಇಳಕಲ್ಲದಲ್ಲಿ ಕೆಬಿಆರ್ ದಾವಣಗೆರೆ ಕಂಪನಿಯ ರಂಗಸಜ್ಜಿಕೆಯಲ್ಲಿ ಲಿಂಗಸಗೂರು ಸಂಗಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ ಚೈತ್ರಯಾತ್ರೆ ನಾಟಕ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು. ಮಹಾಂತೇಶ ಗಜೇಂದ್ರಗಡ, ಬಸವಕೇಂದ್ರ ಅಧ್ಯಕ್ಷ ಶಿವಾನಂದ ರುಳಿ, ಅನ್ನಪೂರ್ಣ ಪಾಟೀಲ, ಮಹಾಂತೇಶ ವಾಲಿ ಮತ್ತು ನಿರ್ದೇಶಕ ಡಾ. ಪ್ರಭುರಾಜ ಇದ್ದಾರೆ. 
ಜಿಲ್ಲೆ

ವಿದ್ಯಾರ್ಥಿಗಳಿಗೆ ರಂಗ ತರಬೇತಿ ಯೋಜನೆ

ಇಳಕಲ್ಲ: ನಾಟಕ ಅಕಾಡೆಮಿ ವತಿಯಿಂದ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡುವ ಯೋಜನೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಜಾರಿಗೆ ತಂದಿದೆ ಎಂದು ಅಕಾಡೆಮಿ ಸದಸ್ಯ ಪ್ರೊ. ಕೆ. ಎ. ಬನ್ನಟ್ಟಿ ಹೇಳಿದರು.

ಇಲ್ಲಿನ ಕೆಬಿಆರ್ ದಾವಣಗೆರೆ ಕಂಪನಿಯ ರಂಗಸಜ್ಜಿಕೆಯಲ್ಲಿ ಲಿಂಗಸಗೂರು ಸಂಗಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಭಾನುವಾರ ಪ್ರದರ್ಶಿಸಿದ ಚೈತ್ರಯಾತ್ರೆ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕಲಾವಿದರನ್ನಾಗಿ ಮಾಡುವ ಉದ್ದೇಶ ಅಕಾಡೆಮಿಗಿದೆ ಎಂದರು.

ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಮಾತನಾಡಿ, ಕೇವಲ 10 ದಿನಗಳ ಅಲ್ಪ ಅವಧಿಯಲ್ಲಿ ಡಾ. ಪ್ರಭುರಾಜ ಈ ನಾಟಕ ಸಿದ್ಧಪಡಿಸಿದ್ದಾರೆ ಎಂದರು.

ಬಸವಕೇಂದ್ರ ಅಧ್ಯಕ್ಷ ಶಿವಾನಂದ ರುಳಿ ಅಧ್ಯಕ್ಷತೆ ವಹಿಸಿದ್ದರು.

ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ, ಮಹಾಂತೇಶ ವಾಲಿ ಮತ್ತು ನಿರ್ದೇಶಕ ಡಾ. ಪ್ರಭುರಾಜ ಉಪಸ್ಥಿತರಿದ್ದರು.