ಜಗಳೂರು: ತಾಲೂಕಿನ ವೆಂಕಟೇಶಪುರ ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗುರುವಾರ 12 ವಷರ್ದ ಬಾಲಾಜಿ ನಾಯ್ಕ ಎಂಬ ವಿದ್ಯಾರ್ಥಿಗೆ ಬೀದಿನಾಯಿಗಳು ಕಚ್ಚಿ ಗಾಯಗೊಳಿಸಿವೆ.
ಬೆಳಗ್ಗೆ ಶಾಲೆಗೆ ತೆರಳಲು ಸಿದ್ಧನಾಗಿ ಮನೆಯಿಂದ ಹೊರಗಡೆ ಹೋಗುತ್ತಿರುವಾಗ ಹಿಂಭಾಗದಿಂದ ಬಂದ ನಾಯಿಗಳ ಹಿಂಡು ಮೈಮೇಲೆ ಎರಗಿ ಬೆನ್ನು, ಕಾಲುಗಳಿವೆ ಕಚ್ಚಿವೆ. ತಕ್ಷಣ ಸ್ಥಳೀಯರು ಧಾವಿಸಿ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕನನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗ್ರಾಮದಲ್ಲಿ ಬೀದಿ ನಾಯಿಗಳು ಉಪಟಳ ಹೆಚ್ಚಾಗಿದ್ದು, ಜನರು ಓಡಾಡಲು ಭಯಪಡುವಂತಾಗಿದೆ. ವಾಹನಗಳಿಗೂ ಅಡ್ಡಬಂದು ಅನೇಕ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಈ ಕುರಿತು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ವೆಂಟಕೇಶಪುರ ಗುರುಸಿದ್ದಾಪುರ ಗ್ರಾಪಂಗೆ ವ್ಯಾಪ್ತಿಗೆ ಒಳಪಟ್ಟಿದೆ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಪಿಡಿಒ ವಾಸು ಅವರ ಗಮನಕ್ಕೂ ತರಲಾಗಿದೆ. ಆದರೆ, ಅವರು ಯಾವ ಕ್ರಮ ಕೈಗೊಂಡಿಲ್ಲ. ನಾಯಿಗಳ ಹತೋಟಿಗೆ ಸಂತಾನಹರಣ ಮಾಡಬೇಕು, ಇಲ್ಲವೇ ಬೇರೆ ಕಡೆ ಸ್ಥಳಾಂತರ ಮಾಡಬೇಕು. ನಿರ್ಲಕ್ಷೃ ವಹಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಿದ್ದೇಶ್‌ನಾಯ್ಕ, ವೆಂಕಟೇಶ್, ಕಾಂತರಾಜ್ ಎಚ್ಚರಿಸಿದ್ದಾರೆ.