ಜಿಲ್ಲೆ

ವಿದ್ಯೆಯ ಜೊತೆಗೆ ಕ್ರೀಡೆ ಮುಖ್ಯ: ಶಂಭುನಾಥ ಶ್ರೀ

ಬೇಲೂರು : ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ತಮ್ಮ ಮುಂದಿನ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಆದಿ ಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮೊಬೈಲ್ ಗೀಳಿಗೆ ದಾಸರಾಗಿರುವುದು ವಿಷಾಧದ ಸಂಗತಿಯಾಗಿದೆ. ಮೊಬೈಲ್‌ನಲ್ಲಿ ವಿದ್ಯಾರ್ಥಿಗಳು ವಿದ್ಯೆಗೆ ಸಹಕಾರಿಯಾದ ಮಾಹಿತಿ ಮಾತ್ರ ಪಡೆಯಬೇಕು. ಜತೆಗೆ ತಮ್ಮ ಮನಸ್ಸು, ಆರೋಗ್ಯ ಮತ್ತು ದೇಹದ ಸಮತೋಲನಕ್ಕಾಗಿ ಕ್ರೀಡೆಗಳಲ್ಲಿ ಬಾಗವಹಿಸಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬೇಕು ಎಂದರು.

ನಮ್ಮ ವಿದ್ಯಾಸಂಸ್ಥೆಗಳಲ್ಲಿ ವಿದ್ಯೆಯೊಂದಿಗೆ ಕ್ರೀಡೆಗೂ ಹೆಚ್ಚು ಪ್ರಾಮುಖ್ಯತೆ ನೀಡುವುದಲ್ಲದೆ, ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಹಾಗೂ ಜಿಲ್ಲೆಯ ಅರಕಲಗೂಡು, ಚನ್ನರಾಯಪಟ್ಟಣ, ಅರಸೀಕೆರೆಯಲ್ಲಿಯೂ ಸಮಗ್ರ ಪ್ರಶಸ್ತಿ ಪಡೆದಿದೆ. ಮುಂದಿನ ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಉತ್ತಮ ಸಾಧನೆ ಮಾಡುವಂತ್ತಾಗಲಿ ಎಂದು ಶುಭ ಕೋರಿದರು.

ಬಿಜಿಎಸ್ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ದೈಹಿಕ ಶಿಕ್ಷಕ ದೇವರಾಜ್, ಉಪನ್ಯಾಸಕ ಕೀರ್ತಿ, ಚಂದ್ರಶೇಖರ್, ಮಹೇಶ್ ಇತರರಿದ್ದರು.