ಕೆ.ಆರ್.ಪೇಟೆ: ಒತ್ತುವರಿ ತೆರವುಗೊಳಿಸದೆ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದನ್ನು ವಿರೋಧಿಸಿ ಸೋಮವಾರ ವಡ್ಡರಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾಮಗಾರಿ ಆರಂಭಿಸುವ ಮೊದಲು ಕಾಮಗಾರಿ ಸಂಬಂಧ ನಾಮಫಲಕ ಅಳವಡಿಸದೆ ಕೆಲಸ ಆರಂಭಿಸಿರುವುದನ್ನು ಖಂಡಿಸಿದರು.
ಕೆರೆ ಒಟ್ಟು 23 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ ಇದೆ ಎಂದು ಆರ್.ಟಿ.ಸಿ.ಯಲ್ಲಿ ಈಗಲೂ ದಾಖಲೆ ಇದೆ. ಆದರೆ ಕೆರೆಯ ಸುತ್ತಲೂ ಒತ್ತುವರಿ ಮಾಡಿಕೊಂಡಿರುವ ಕಾರಣ ಈಗ ಕೇವಲ 10 ಎಕರೆಯಷ್ಟು ಮಾತ್ರ ಕೆರೆಯಂಗಳ ಉಳಿದಿದೆ. ಕೆರೆಯಲ್ಲಿ ತೆಗೆಯುವ ಹೂಳನ್ನು ಅದೇ ಒತ್ತುವರಿದಾರರ ಜಮೀನಿನ ಪಕ್ಕಕ್ಕೆ ಹಾಕುತ್ತಿರುವ ಕಾರಣ ಒತ್ತುವರಿದಾರರು ಮತ್ತೆ ಕೆರೆ ಕಬಳಿಸಲು ಸುಲಭವಾಗಿದೆ ಎಂದು ದೂರಿದರು.
ಕೂಡಲೇ ಸಣ್ಣ ನೀರಾವರಿ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರು ಕೆರೆ ಒತ್ತುವರಿ ತೆರವುಗೊಳಿಸಿ ನಂತರ ಕೆರೆ ಅಭಿವೃದ್ಧಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕೆರೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಒತ್ತುವರಿ ತೆರವು ಮಾಡುವವರೆವಿಗೂ ಕಾಮಗಾರಿ ನಿಲ್ಲಿಸುವಂತೆ ರೈತರು ತಾಕೀತು ಮಾಡಿದರು.
ಕೂಡಲೇ ಸಣ್ಣ ನೀರಾವರಿ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಸೂಕ್ತ ಕ್ರಮಕೈಗೊಳ್ಳದೆ ಇದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಗ್ರಾಮದ ರೈತರಾದ ಮಧು, ಲೋಕೇಶ್, ಮಂಜು, ಜಯಶಂಕರ್, ಚಂದ್ರು, ಸುಬ್ರಹ್ಮಣ್ಯ, ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಆಲೇನಹಳ್ಳಿ ಕಿಶೋರ್, ಉಪಾಧ್ಯಕ್ಷ ಮುರುಗೇಶ್, ಪದಾಧಿಕಾರಿಗಳಾದ ಪುಟ್ಟರಾಜು, ಮಂಜು, ಶಿವಕುಮಾರ್, ನಾಗೇಶ್ ಮತ್ತಿತರರು ಭಾಗವಹಿಸಿದ್ದರು.