ವಡಗೇರಾ: ವಷರ್ದೊಳಗೆ ವಡಗೇರಾ ಶೈಕ್ಷಣಿಕ ತಾಲೂಕು ಕೇಂದ್ರ ಮಾಡುವುದಲ್ಲದೆ ಪದವಿಪೂರ್ವ ಕಾಲೇಜು ಆರಂಭಿಸುವುದಾಗಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
೨೦೨೨-೨೩ರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಬುಧವಾರ ನಾಯ್ಕಲ್ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದ ಅವರು, ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ಅಂಗನವಾಡಿ ಕಟ್ಟಡ, ಗ್ರಾಮೀಣ ರಸ್ತೆಗಳ ದುರಸ್ತಿ, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಮುಂದಾಗಿದ್ದು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಭಾಗದ ಜನ ಉದ್ಯೋಗ ಅರಿಸಿ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಜತೆ ಚರ್ಚಿಸಿ ಕೈಗಾರಿಕೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಮೈರುನ್ನೀಸಾ, ಉಪಾಧ್ಯಕ್ಷೆ ಯಲ್ಲಮ್ಮ ದೊರೆ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ, ತಾಪಂ ಇಒ ಮಲ್ಲಿಕಾರ್ಜುನ ಸಂಗವಾರ, ಶರಣಪ್ಪ ಕ್ಯಾತ್ನಾಳ, ಮಲ್ಲಿಕಾರ್ಜುನರಡ್ಡಿ ಗುಂಡಗುರ್ತಿ, ಶರಣಪ್ಪ ಬೋಳಾರಿ, ರಾಜುಗೌಡ, ಹಣಮಂತ ಟೋಕಾಪುರ, ನಬಿಸಾಬ್, ಮಲ್ಲಿಕಾರ್ಜುನ ಈಟಿ, ಸತ್ಯನಾರಾಯಣ ದೊರೆ, ರೇವಣಸಿದ್ದಯ್ಯ ಇದ್ದರು.
ಬಳಿಕ ಶಾಸಕರು ಟೋಕಾಪುರ, ಬೋಳಾರಿ, ಗುಂಡಗುರ್ತಿ, ಅಗಸ್ತಿಹಾಳ, ವಡಗೇರಾ(ಟಿ), ಕಿರಿಹೈಯಾಳ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಬಗೆಹರಿಸಲು ಜತೆಗಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ವಡಗೇರಾದಲ್ಲಿ ಸದ್ಯ ಉಪ ನೋಂದಣಾಧಿಕಾರಿ ಕಚೇರಿ ಆರಂಭಿಸಲಾಗುವುದು. ಇದರಿಂದ ಈ ಭಾಗದ ಕೊನೇ ಅಂಚಿನ ಗ್ರಾಮದ ರೈತರಿಗೆ ಸಾಕಷ್ಟು ಅನುಕೂಲವಾಗುವುದರ ಜತೆಗೆ ಸಮಯ ಮತ್ತು ಹಣದ ಉಳಿತಾಯವೂ ಆಗಲಿದೆ.
| ಚನ್ನಾರಡ್ಡಿ ಪಾಟೀಲ್ ತುನ್ನೂರ ಶಾಸಕ