ದೇವಲಗಾಣಗಾಪುರ: ಕರೊನಾ ಸಂಕಷ್ಟದಿಂದ ಎಲ್ಲೆಡೆ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಮಕ್ಕಳು ಶಿಕ್ಷಣದಿಂದ ವಿಮುಖರಾಗಬಾರದು ಎಂದು ಅಫಜಲಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ತಾಲೂಕಿನಾದ್ಯಂತ ಶಿಕ್ಷಕರ ಮನವೊಲಿಸಿ ವಠಾರ ಶಾಲೆ ಆರಂಭಿಸುವ ಅರ್ಥಪೂರ್ಣ ಪ್ರಯತ್ನಕ್ಕೆ ಮುಂದಾಗಿದ್ದು, ಅಲ್ಲಲ್ಲಿ ಶಿಕ್ಷಕರು ಉತ್ತಮ ಸಾಥ್ ನೀಡುತ್ತಿದ್ದಾರೆ.
ತಾಲೂಕಿನ 30 ಗ್ರಾಮಗಳಲ್ಲಿ ಗುಡಿ ಗುಂಡಾರ, ಕಟ್ಟೆ, ಬಯಲು ಸ್ಥಳ, ಚಾವಡಿ, ದರ್ಗಾ ಮುಂತಾದ ಸ್ಥಳಗಳನ್ನು ಆಯ್ಕೆ ಮಾಡಿ ಆಯಾ ವಠಾರದ ಮಕ್ಕಳನ್ನು ಅಲ್ಲಿಯೇ ಕೂಡಿಸಿ, ಶಿಕ್ಷಕರು ಪಾಠ ಮಾಡುವ ಯೋಜನೆ ಕೆಲ ಗ್ರಾಮಗಳಲ್ಲಿ ಆರಂಭವಾಗಿದೆ.
ಸದ್ಯಕ್ಕೆ ಶಾಲೆ ಆರಂಭವಾಗುವ ಯಾವುದೇ ಲಕ್ಷಣಗಳು ಸದ್ಯಕ್ಕಿಲ್ಲ. ಆದ್ದರಿಂದ ಅವರ ವಠಾರದಲ್ಲೇ 10ರಿಂದ 15 ಮಕ್ಕಳನ್ನು ಸೇರಿಸಿ, ಕರೊನಾ ಜಾಗೃತಿ ಜತೆಗೆ ಪಾಠ ಬೋಧಿಸುವ ಯೋಜನೆ ಆರಂಭ ಮಾಡುತ್ತಿದ್ದಾರೆ.
ಮಕ್ಕಳಿಗೆ ಎಸ್ಒಪಿ ಮಾರ್ಗಸೂಚಿಯನ್ವಯ ಪರಸ್ಪರ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸಿ, ಮಾಸ್ಕ್ ಹಾಕಿಕೊಂಡು ಕಲಿಕೆಯಲ್ಲಿ ಮಕ್ಕಳು ತೊಡಗುವಂತೆ ಮಾಡುವಲ್ಲಿ ವಠಾರದತ್ತ ಶಾಲೆ ಯಶಸ್ವಿಯಾಗಲಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ತಿಳಿದರು.
ಅಫಜಲಪುರ ತಾಲೂಕಿನಲ್ಲಿ 30 ಗ್ರಾಮಗಳಲ್ಲಿ ವಠಾರ ಶಾಲೆ ಆರಂಭಗೊಂಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್ಸಿ, ಬಿಆರ್ಪಿ, ಸಿಆರ್ಪಿ, ಮುಖ್ಯ ಗುರುಗಳು, ಶಿಕ್ಷಕರು, ಶಿಕ್ಷಕಿಯರು ಕೆಲಸ ಮಾಡುತ್ತಿದ್ದು ಈ ಕಾರ್ಯಕ್ರಮ ಇತರರಿಗೂ ಮಾರ್ಗದಶರ್ಿಯಾಗಲಿದೆ ಎನ್ನುತ್ತಾರೆ ಸಮನ್ವಯಾಧಿಕಾರಿ ಸುಧಾಕರ ನಾಯಕ.
ಬಂದರವಾಡ, ಹಸರಗುಂಡಗಿ ಪ್ರೌಢ ಶಾಲೆಗಳು ಹಾಗೂ ಪ್ರಾಥಮಿಕ ಶಾಲೆಗಳಾದ ಕೆಕ್ಕರಸಾವಳಗಿ (ಸಂಗಾಪೂರ) ಗುಡೂರ, ಮಲ್ಲಾಬಾದ್ನಲ್ಲಿ ಮುಖ್ಯ ಗುರುಗಳು ಹಾಗೂ ಶಿಕ್ಷಕರು ವಠಾರದತ್ತ ಶಾಲೆ ಆರಂಭಿಸಿದ್ದಾರೆ. ಮಕ್ಕಳಿಗೆ ಕೆಲ ಅಧಿಕಾರಿಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ನೋಟ್ಬುಕ್, ಪೆನ್, ಪೆನ್ಸಿಲ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಶಿಕ್ಷಣಕ್ಕೆ ಸಾಥ್ ನೀಡುತ್ತಿದ್ದಾರೆ.
ಮುಂಬೈನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಬಸವರಾಜ ಬನಸೋಡೆ ಅವರು ವಠಾರ ಶಾಲೆ ಪರಿಕಲ್ಪನೆ ಮೆಚ್ಚಿ ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ್ದಾರೆ.
ವಠಾರ ಶಾಲೆ ಕಾರ್ಯಕ್ರಮದಿಂದ ಸಂತೋಷವಾಗಿದೆ. ನಾವು ಜಾಗೃತಿಯಿಂದ ಶಾಲೆ ಕಲಿಯುವ ಜತೆಗೆ ಕರೊನಾ ಜಾಗೃತಿಯನ್ನು ಮೂಡಿಸಿಕೊಳ್ಳುತ್ತಿದ್ದೇವೆ. ಹೈರಾಣ ಸ್ಥಿತಿಯಲ್ಲಿ ಮನೆಗೆ ಬಂದು ಪಾಠ ಹೇಳುತ್ತಿರುವ ಶಿಕ್ಷಕರಿಗೆ ಧನ್ಯವಾದಗಳು.
| ತೇಜಸ್ವಿ, 9ನೇ ತರಗತಿ ವಿದ್ಯಾರ್ಥಿನಿ ಹಸರಗುಂಡಗಿ.
ವಠಾರ ಶಾಲೆ ಕಾರ್ಯಕ್ರಮ ನಮ್ಮ ಆತ್ಮ ತೃಪ್ತಿಯಿಂದ ಮಾಡುತ್ತಿದ್ದೇವೆ. ಅಧಿಕಾರಿಗಳ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನಮಗೆ ಮತ್ತಷ್ಟು ಕೆಲಸ ನಿರ್ವಹಿಸಲು ಹುಮ್ಮಸ್ಸು ನೀಡುತ್ತಿದೆ. ವಠಾರ ಶಾಲೆ ಮಾದರಿಯಾಗಿ ಮಾಡಿ ಮಕ್ಕಳ ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗುತ್ತೇವೆ.
ಪರಮಾನಂದ ಸರಸಂಬಿ, ಜಾವೀದ್ ಹುಂಡೇಕಾರ್,
ಕೆಕ್ಕರಸಾವಳಗಿ ಶಾಲೆ ಶಿಕ್ಷಕರು.