ಇಂದ್ರಾಣಿ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀ ಶಾರದಾಪರಮೇಶ್ವರಿ. 
ಜಿಲ್ಲೆ

ವಜ್ರಾಯುಧ ಧರಿಸಿದ ಶ್ರೀ ಶಾರದೆ

ಎಸ್.ಎನ್.ರವೀಂದ್ರ

ಶೃಂಗೇರಿ: ನವರಾತ್ರಿ ಮಹೋತ್ಸವ ಸಲುವಾಗಿ ಶನಿವಾರ ಮಠದಲ್ಲಿ ಶ್ರೀ ಶಾರದಾ ಪರಮೇಶ್ವರಿ ಇಂದ್ರಾಣಿ ಅಲಂಕಾರದಲ್ಲಿ ಕಂಗೊಳಿಸಿದಳು. ಜಗನ್ಮಾತೆ ವಜ್ರಾಯುಧ ಧರಿಸಿ, ಐರಾವತವನ್ನೇರಿ, ದೇವೇಂದ್ರನ ಪಟ್ಟಮಹಿಷಿಯಾಗಿ ದುಷ್ಟದೈತ್ಯರನ್ನು ಸಂಹರಿಸಿ ಭಕ್ತರನ್ನು ಅನುಗ್ರಹಿಸಿದಳು.

ಮಠದಲ್ಲಿ ಶತಚಂಡೀಯಾಗದ ಪ್ರಯುಕ್ತ ಶಾಲಾಪ್ರವೇಶ, ಪುರಶ್ಚರಣಾರಂಭ ನೆರವೇರಿತು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ಪಾರಾಯಣ, ದುರ್ಗಾಸಪ್ತಶತಿ, ಲಕ್ಷ್ಮೀನಾರಾಯಣ ಹೃದಯ, ಸೂತಸಂಹಿತೆ ಪಾರಾಯಣಗಳು, ಸೂರ್ಯನಮಸ್ಕಾರ, ಶ್ರೀಸೂಕ್ತ ಜಪ, ದುರ್ಗಾ ಜಪ, ಭುವನೇಶ್ವರಿ ಜಪ ನೆರವೇರಿದವು. ಸುವಾಸಿನೀ ಹಾಗೂ ಕುಮಾರೀ ಪೂಜೆ ಜರುಗಿತು. ಜಗದ್ಗುರುಗಳು ಶ್ರೀ ಶಾರದಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಪ್ರವಚನ ಮಂದಿರದಲ್ಲಿ ಯತಿವರ್ಯರ ಸಮ್ಮುಖದಲ್ಲಿ ಶ್ರೀ ಶಾರದೆಗೆ ಡೋಲೋತ್ಸವ ನೆರವೇರಿತು. ಬಳಿಕ ಶ್ರೀ ಚಂದ್ರಮೌಳೀಶ್ವರರಿಗೆ ವಿಶೇಷ ಪೂಜೆ ನೆರವೇರಿತು.

ಬೀದಿ ಉತ್ಸವದಲ್ಲಿ ನೆಮ್ಮಾರ್ ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು ಭಾಗವಹಿಸಿದ್ದರು. ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ್ ಬ್ರಾಹ್ಮಣ ಮಹಾಸಭಾ, ನೆಮ್ಮಾರ್ ಶ್ರೀರಾಮ ಸೇವಾ ಸಮಿತಿ, ಶ್ರೀ ವಿದ್ಯಾವಿನಾಯಕ ಗೆಳೆಯರ ಬಳಗ, ವನದುರ್ಗಾ ಸೇವಾ ಸಮಿತಿ, ಶ್ರೀ ವಿನಾಯಕ ಸೇವಾ ಸಮಿತಿ, ವಿಶ್ವ ಹಿಂದು ಪರಿಷತ್ತು, ಬಜರಂಗದಳ, ಶ್ರೀರಾಮ ಸೇನೆ, ಪ್ರಬೋಧಿನಿ ಭಜನಾ ಮಂಡಳಿ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲಕ್ಯಾಡ್ ವಿದ್ವಾನ್ ರವಿ ಭಾಗವತರ್ ಮತ್ತು ವೃಂದದಿಂದ ನಾಮಸಂಕೀರ್ತನೆ ನಡೆಯಿತು.

ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಕಿರೀಟ, ಆಭರಣಗಳನ್ನು ಧರಿಸಿ ಶ್ರೀ ಶಾರದಾ ದೇವಾಲಯಕ್ಕೆ ಉತ್ಸವದಲ್ಲಿ ಆಗಮಿಸಿದರು. ಯತಿವರ್ಯರು ದೇವಾಲಯ ಪ್ರವೇಶಿಸಿದ ಬಳಿಕ ಬಂಗಾರರಥದಲ್ಲಿ ಶ್ರೀಶಾರದೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ದೇವಾಲಯದ ಒಳಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ಘೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ಸಪ್ತಶತಿ ಪಾರಾಯಣ, ಜಗನ್ಮಾತೆಗೆ ಮಹಾಮಂಗಳಾರತಿ, ವೇದಗಳ ಪಾರಾಯಣ, ಸರ್ವಸಂಗೀತ ಹಾಗೂ ವಾದ್ಯ ಸೇವೆ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ವಿಧಿಗಳು ನೆರವೇರಿದವು.

ಸೆ.28ರಂದು ಶ್ರೀ ಶಾರದೆ ಮೋಹಿನಿ ಅಲಂಕಾರದಲ್ಲಿ ಕಂಗೊಳಿಸಲಿದ್ದಾಳೆ. ಬೀದಿ ಉತ್ಸವದಲ್ಲಿ ಬೇಗಾರು ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಹರಿನಾಮದ್ವಾರ್ ಮತ್ತು ವೃಂದದಿಂದ ನಾಮಸಂಕೀರ್ತನೆ ನಡೆಯಲಿದೆ.