ಜಿಲ್ಲೆ

ವಜ್ರಕುಮಾರ ಕಾರ್ಯ ಸ್ಮರಣೀಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರೊ. ನ. ವಜ್ರಕುಮಾರ ಕಟ್ಟಿ ಬೆಳೆಸಿದ ಜೆಎಸ್‌ಎಸ್ ಸಂಸ್ಥೆಯಲ್ಲಿ ಎಲ್‌ಕೆಜಿಯಿಂದ ಪಿಜಿ, ಪಿಎಚ್.ಡಿ ವರೆಗೆ ಶಿಕ್ಷಣ ವ್ಯವಸ್ಥೆ ಇರುವುದನ್ನು ಗಮನಿಸಿದರೆ ಇಡೀ ವಿಶ್ವವೇ ಇಲ್ಲಿದೆ ಎಂಬಂತಿದೆ. ಒಬ್ಬ ಶಿಲ್ಪಿ ಕಲ್ಲಿನಲ್ಲಿರುವ ಬೇಡವಾದ ಭಾಗ ತೆಗೆದು ಸುಂದರ ಮೂರ್ತಿ ಸೃಷ್ಟಿಸುವಂತೆ ವಜ್ರಕುಮಾರವರು ಗುಡ್ಡವನ್ನು ಸುಂದರ ಶಿಕ್ಷಣ ಸಂಸ್ಥೆ ನಿರ್ಮಿಸಿದ್ದಾರೆ ಎಂದು ಉಪ್ಪಿನಬೆಟಗೇರಿ ವಿರಕ್ತಮಠದ ಶ್ರೀ ಗುರುವಿರೂಪಾಕ್ಷೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಜನತಾ ಶಿಕ್ಷಣ ಸಮಿತಿ ಶನಿವಾರ ಆಯೋಜಿಸಿದ್ದ ಪ್ರೊ. ನ. ವಜ್ರಕುಮಾರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಜ್ರಕುಮಾರ ಅವರ ವ್ಯಕ್ತಿತ್ವ, ಮನಸ್ಸನ್ನು ಎಲ್ಲ ವ್ಯಕ್ತಿಗಳಲ್ಲಿ ಹುಡುಕಲು ಸಾಧ್ಯವಿಲ್ಲ. ಅಂತರಂಗ-ಬಹಿರಂಗ ಪರಿಶುದ್ಧರಾಗಿದ್ದರು. ಇನ್ನೊಬ್ಬರ ಕಷ್ಟ-ಸುಖಗಳಲ್ಲಿ ಪಾಲುದಾರರಾಗಿದ್ದರು. ಅವರ ಅಂತಃಕರಣ ನಿಷ್ಕಲ್ಮಶವಾಗಿತ್ತು. ಅವರ ಸ್ಥಾನವನ್ನು ಡಾ. ಅಜಿತ ಪ್ರಸಾದ ತುಂಬುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಹುಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಮಾತನಾಡಿ, ನಾವು ನಮ್ಮ ವ್ಯಕ್ತಿತ್ವ ವೃದ್ಧಿಸಿಕೊಳ್ಳುತ್ತೇವೆ. ಹುಟ್ಟುವಾಗ ಸಾಮಾನ್ಯ ಆತ್ಮವಾಗಿದ್ದು, ಮಾಡುವ ಕಾರ್ಯದ ಮೂಲಕ ಮಹಾತ್ಮರಾಗುತ್ತೇವೆ. ಮುಂದೆ ಪರಮಾತ್ಮರಾಗುತ್ತಾರೆ. ಪರಮಾತ್ಮತನದ ವ್ಯಕ್ತಿತ್ವ ಪಡೆದವರು ನ. ವಜ್ರಕುಮಾರ. ಅವರೊಬ್ಬ ವ್ಯಕ್ತಿ ಆಗಿರದೆ ಅದ್ಭುತ ಶಕ್ತಿಯಾಗಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಕೇವಲ 280 ವಿದ್ಯಾರ್ಥಿಗಳಿದ್ದ ಸಂಸ್ಥೆಯನ್ನು 22,000 ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುವಂತಾಗಲು ವಜ್ರಕುಮಾರ ಪಟ್ಟ ಶ್ರಮ ಅಷ್ಟಿಷ್ಟಲ್ಲ. ದೇಶದ ನಕಾಶೆಯಲ್ಲಿ ಧಾರವಾಡಕ್ಕೆ ಒಂದು ಸ್ಥಾನ ತಂದು ಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗುತ್ತಿದ್ದೇವೆ ಎಂದರು.
ಪ್ರೊ. ನ. ವಜ್ರಕುಮಾರ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಸುಮನ ವಜ್ರಕುಮಾರ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು. ಡಾ. ಸೂರಜ್ ಜೈನ್ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಮಹಾವೀರ ಉಪಾಧ್ಯೆ ವಂದಿಸಿದರು.