ಜಿಲ್ಲೆ

ವಚನಗಳಲ್ಲಿದೆ ಬದುಕಿನ ಚಿಂತನೆ

ಕೂಡ್ಲಿಗಿ: ವಿಶ್ವಗುರು ಬಸವಣ್ಣ ಅವರು ಜ್ಞಾನದ ದೀಪ ಹಚ್ಚಿದ ಮಹಾನ್ ಮಾನವತಾವಾದಿಯಾಗಿದ್ದು, ಅವರ ತತ್ವ ಆದರ್ಶಗಳು ಬದುಕಿಗೆ ದಾರಿ ದೀಪವಾಗಿವೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಅಂಗವಾಗಿ ಪೇಟೆ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಎತ್ತುಗಳ ಮೆರವಣಿಗೆಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಜಗಜ್ಯೋತಿ ಬಸವಣ್ಣ ಅವರು ವಚನಗಳ ಮೂಲಕ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಪ್ರಯತ್ನಿಸಿದರು ಎಂದರು.

ಕರ್ನಾಟಕದ ಪಾಲಿಗೆ 12ನೇ ಶತಮಾನ ತುಂಬ ಮುಖ್ಯವಾಗಿದೆ. ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯ ಹೊಸ ಚಿಂತನೆ ರೂಪುಗೊಂಡ ಕಾಲವದು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟವದು. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದ ಆ ಕಾಲದಲ್ಲಿ ವಚನಕಾರರು ಸರಳ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದರು. ಜಾತಿಯ ಹಂಗಿಲ್ಲದೆ ಎಲ್ಲ ವರ್ಗದ ವಚನಕಾರರು ವಚನಗಳ ಮೂಲಕ ಹೊಸ ಚಿಂತನೆಗಳನ್ನು ಕಟ್ಟಿಕೊಟ್ಟರು ಎಂದು ತಿಳಿಸಿದರು.

ಬಸವಣ್ಣ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣ ಸಾರಥ್ಯದಲ್ಲಿ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಬಸವಣ್ಣ ಅವರ ತತ್ವ, ಆದರ್ಶಗಳು, ಚಿಂತನೆಗಳು ಎಂದಿಗೂ ಪ್ರಸ್ತುತ. ವಿಶ್ವಗುರು ಬಸವಣ್ಣ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯವಾಗಲಿದೆ ಎಂದು ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಇದಕ್ಕೂ ಮೊದಲು ಪಟ್ಟಣದ ಲೋಕನ ಗೌಡ್ರು ಲೇ ಔಟ್ ಮತ್ತು ತಾಲೂಕು ಕಚೇರಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ತಹಸೀಲ್ದಾರ್ ವಿ. ಕೆ.ನೇತ್ರಾವತಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎಂ.ಗುರುಸಿದ್ದನಗೌಡ, ನಿರ್ದೇಶಕ ಕೋಗಳಿ ಮಂಜುನಾಥ, ತಾಲೂಕು ಅಧ್ಯಕ್ಷ ಸುನೀಲ್ ಗೌಡ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಹೊಂಬಾಳೆ ರೇವಣ್ಣ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಗುಳಿಗಿ ವೀರೇಂದ್ರ, ಜಿ.ಎಸ್.ಗಿರೀಶ್, ನಾಗರಾಜ ಕೊಟ್ರಪ್ಪನವರ್, ವಿಭೂತಿ ವೀರಣ್ಣ, ತುಪ್ಪಳ್ಳಿ ಮೂಗಣ್ಣ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಇತರರಿದ್ದರು.