ಮುನವಳ್ಳಿ: ಬಸವಾದಿ ಶರಣರ ವಚನಗಳನ್ನು ಆದರ್ಶವಾಗಿಟ್ಟುಕೊಂಡು ಚಾರಿತ್ರಿಕ ವ್ಯಕ್ತಿತ್ವದ ಜತೆಗೆ ಆರೋಗ್ಯಕರ ಸಮಾಜ ನಿರ್ಮಿಸಬಹುದು ಎಂದು ಜಾನಪದ ತಜ್ಞ ಡಾ.ಸಿ.ಕೆ.ನಾವಲಗಿ ಅಭಿಪ್ರಾಯಪಟ್ಟರು.
ಪಟ್ಟಣದ ಜೆಎಸ್‌ಪಿ ಸಂಘದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಮುರಗೋಡ ಮಹಾಂತ ಶಿವಯೋಗೀಶ್ವರ ಶತಮಾನೋತ್ಸವ ಸ್ಮಾರಕ, ಶ್ರೀ ಬಸವೇಶ್ವರಪೀಠ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಿವು, ಅಕ್ಷರ, ಅನುಸಂಧಾನದ ಮೂಲಕ ಅನುಭವ ಮಂಟಪವನ್ನು ಶರಣರು ಕಟ್ಟುವ ಮೂಲಕ ವ್ಯಕ್ತಿ ಮೊದಲು ತನ್ನ ಅಂತರಂಗ ಅರಿಯಬೇಕು. ವಚನಗಳಲ್ಲಿ ಸಾಹಿತ್ಯ, ಸಮಾಜ ವಿಜ್ಞಾನ, ಮನಃಶಾಸ, ರಾಜಕೀಯ ನೀತಿ, ಅರ್ಥಶಾಸದ ಜತೆಗೆ ಬದುಕುವ ಕಲೆ ಅಡಗಿದೆ. ಬದುಕಿನಲ್ಲಿ ಸುಂದರ ಹಾಗೂ ಚಾರಿತ್ರಿಕ ವ್ಯಕ್ತಿತ್ವ ಹೊಂದಲು ಶರಣರ ವಚನಗಳು ಪೂರಕವಾಗಿವೆ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ.ಬಸು ಬೇವಿನಗಿಡದ ಮಾತನಾಡಿ, ಬದುಕಿನ ಮೌಲ್ಯಗಳನ್ನು ಜ್ಞಾನ ಸಂಪಾದನೆಯಿಂದ ಪಡೆದುಕೊಳ್ಳಬೇಕು. ಜ್ಞಾನಕ್ಕೆ ಸಿಗುವ ಗೌರವ ಬೇರಾವುದಕ್ಕೂ ಸಿಗುವುದಿಲ್ಲ. ಜ್ಞಾನದಿಂದ ಮಾತ್ರ ವ್ಯಕ್ತಿತ್ವ ನಿರ್ಮಾಣಗೊಳ್ಳಲಿದೆ ಎಂದರು. ರವೀಂದ್ರ ಯಲಿಗಾರ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಸಮಾಜಕ್ಕೆ ನೀಡಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಬಸವಪೀಠದ ಸಂಯೋಜಕ ಡಾ.ಸಿ.ಎಂ.ಕುಂದಗೋಳ ಮಾತನಾಡಿ, ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ವಚನಗಳು ಪ್ರೇರಣಾದಾಯಕವಾಗಿವೆ ಎಂದರು.ಸಂಸ್ಥೆಯ ಚೇರ್ಮನ್ ಎಂ.ಆರ್.ಗೋಪಶೆಟ್ಟಿ, ಗೌರವಕಾರ್ಯದರ್ಶಿ ವಿ.ಎಸ್. ಯಕ್ಕುಂಡಿ, ಪ್ರಾಚಾರ್ಯ ಡಾ.ಎಂ.ಎಸ್.ಬಾಗೇವಾಡಿ, ಸುಧಾಕರ ರೇಣಕೆ, ಎ.ಎಂ.ಕರೀಕಟ್ಟಿ, ಪ್ರೊ.ಆರ್.ಎ.ಮೇಟಿ, ಲಕ್ಷ್ಮೀ ಬಾಗನ್ನವರ, ಶ್ರೀಧರ ಯಲಿಗಾರ ಇತರರು ಇದ್ದರು.