ಜಿಲ್ಲೆ

ವಚನಗಳನ್ನು ಅನುಸರಿಸಿದರೆ ವ್ಯಕ್ತಿತ್ವ ವಿಕಸನ

ನಂಜನಗೂಡು: ವ್ಯಕ್ತಿತ್ವ ವಿಕಸನಕ್ಕೆ ವಚನಗಳು ಅತ್ಯುತ್ತಮ ಸೂತ್ರಗಳಾಗಿದ್ದು, ನಾಲ್ಕು ವಚನಗಳ ನಾಲ್ಕು ಸಾಲುಗಳನ್ನು ಅನುಸರಿಸಿದರೆ ಸುಂದರವಾದ ಬದುಕನ್ನು ನಡೆಸಬಹುದು ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಹೇಳಿದರು.


ಪಟ್ಟಣದ ಗುರುಮಲ್ಲೇಶ್ವರ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಚನ ಶ್ರಾವಣದಲ್ಲಿ ಮಾತನಾಡಿದ ಅವರು, ಮನಸ್ಸನ್ನು ಸಂತೈಸುವ ಶಕ್ತಿ ವಚನಗಳಲ್ಲಿದ್ದು, ಮೌಢ್ಯ ಆಚರಣೆ, ಮೂಢನಂಬಿಕೆಗಳ ವಿರುದ್ಧ ಸೆಟೆದು ನಿಂತು ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಒಂಬೈನೂರು ವರ್ಷಗಳ ಹಿಂದೆ ಬಸವಣ್ಣ ಬಿತ್ತಿದ ವಚನ ತತ್ತ್ವಗಳನ್ನು ಮೈಸೂರು ಭಾಗದಲ್ಲಿ ಮಹಾತ್ಮ ಗುರುಮಲ್ಲೇಶ್ವರರು ಪಸರಿಸಿದರು. 20ನೆಯ ಶತಮಾನದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ನಡೆಸಿದ್ದ ಅಕ್ಷರ ದಾಸೋಹ ನಮಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.

ವಿಶ್ವ ಬಸವ ಸೇನೆಯ ಹಿರಿಯ ನಂಜಪ್ಪ ಮಾತನಾಡಿದರು. ವಿಶ್ವ ಬಸವ ಸೇನೆಯ ಅಧ್ಯಕ್ಷ ಬಸವ ಯೋಗೇಶ್, ಉಪಾಧ್ಯಕ್ಷ ಮಹೇಶ್ ಕಲ್ಪುರೆ, ಸಂಘಟನಾ ಕಾರ್ಯದರ್ಶಿ ರಾಜಶೇಖರ್ ರೇವಣ್ಣ, ಮಹಿಳಾ ಬಳಗದ ಅಧ್ಯಕ್ಷೆ ಜ್ಯೋತಿ, ಮುಖಂಡರಾದ ಆಯರಹಳ್ಳಿ ಪ್ರಭುಸ್ವಾಮಿ, ಅಂಗಳಪುರ ಸುರೇಶ್, ಸಿದ್ದಲಿಂಗಸ್ವಾಮಿ, ಮುಖ್ಯಶಿಕ್ಷಕ ಬಸವಣ್ಣ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಇದ್ದರು.