ಜಿಲ್ಲೆ

ವಚನಗಳ ಸಾರ ಅರಿತರೆ ಬದುಕು ಸಾರ್ಥಕ -ಸಂತೆಬೆನ್ನೂರಲ್ಲಿ ಸಾಹಿತ್ಯ ಕಾರ್ಯಕ್ರಮ

ದಾವಣಗೆರೆ: ಹನ್ನೆರಡನೆಯ ಶತಮಾನದ ವಚನಗಳು ಮಾನವ ಕುಲದ ಕೈ ದೀವಿಗೆಗಳು. ಅವುಗಳನ್ನು ಅರಿತವರು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬಲ್ಲರು ಎಂದು ವಾಗ್ಮಿ, ಶಿಕ್ಷಕ ಕೆ.ಎಸ್.ನಾಗರಾಜ್ ಹೇಳಿದರು.

ಸಂತೆಬೆನ್ನೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಸದ ಮಾತು ಸಾಹಿತ್ಯ ಕಾರ್ಯಕ್ರಮದಲ್ಲಿ ವಚನ ವೈಶಿಷ್ಟ್ಯ ವಿಷಯ ಕುರಿತು ಮಾತನಾಡಿದರು. ಬಸವಾದಿ ಶರಣರು ವಚನಗಳನ್ನು ರಚಿಸಿ ಜನರ ಬದುಕನ್ನು ಕಟ್ಟುವ ಯತ್ನ ಮಾಡಿದರು. ಅನುಭವ ಮಂಟಪದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಲೋಕ ಕಲ್ಯಾಣದ ಕೆಲಸದೊಂದಿಗೆ ಜನಮನ ತಿದ್ದಿದರು. ಎಲ್ಲರೂ ಶರಣರ ಬದುಕು, ಬರಹ ಓದಬೇಕು ಎಂದು ತಿಳಿಸಿದರು. ಜೀವನದ ಜಂಜಾಟ ಮರೆತು ವಚನ ಲೋಕ ಪ್ರವೇಶಿಸಿದರೆ ಬದುಕು ಧನ್ಯವಾಗುತ್ತದೆ. ವಚನಗಳ ಸಾರ ಅರಿತು ಬದುಕಿದರೆ ಸಮಾಜದಲ್ಲಿ ಅಶಾಂತಿ, ಹಿಂಸೆ ಹಾಗೂ ಅಧರ್ಮ ಮುಂತಾದ ಅನಿಷ್ಟಗಳ ಸುಳಿವಿರುವುದಿಲ್ಲ ಎಂದರು. ಕೆ.ಸಿದ್ದಲಿಂಗಪ್ಪ, ಟಾಕೀಸ್ ಪ್ರಕಾಶ್, ನಾಗೇಂದ್ರಪ್ಪ, ಸಿದ್ದಿಖ್, ಬಾವಿಕಟ್ಟೆ ನಾಗರಾಜ್, ಎಸ್. ಈ.ಮಂಜುನಾಥ್, ಯಶೋಧಮ್ಮ, ಮಾರುತಿ, ಫೈಜ್ನಟ್ರಾಜ್, ಬಸವರಾಜಪ್ಪ, ಸಿ.ಪಿ ಅನಿತಾ, ಶರತ್, ಸರ್ವದೆ ಮಂಜುನಾಥ್ ಇತರರು ಇದ್ದರು. ಇ- ಗ್ರಾಮದ ಹೊನ್ನಶ್ರಿ ಗೌಡರು ಕಾರ್ಯಕ್ರಮ ಆಯೋಜಿಸಿದ್ದರು. ಅಪೇಕ್ಷಾ ಮತ್ತು ಚಂದಾ ಕಾರ್ಯಕ್ರಮ ನಿರೂಪಿಸಿದರು. ಲತಾ ಉಲ್ಲಾಸ್ ವಚನಗಾಯನ ನಡೆಸಿಕೊಟ್ಟರು.