ಆಲೂರು ಪಟ್ಟಣದ ತಾಲೂಕು ಮಿನಿ ವಿಧಾನಸೌಧ ಆವರಣದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ಮಾಡಿದ ನಿರ್ಮಿತಾಳನ್ನು ತಾಲೂಕು ಆಡಳಿತ ಗೌರವಿಸಿ ಸನ್ಮಾನಿಸಿತು. ಅಂಕೇಗೌಡ, ಕೆ.ಎಸ್. ಮಂಜೇಗೌಡ, ಬಸವರಾಜ್ ಇತರರು ಹಾಜರಿದ್ದರು.  
ಜಿಲ್ಲೆ

ವಚನಗಳ ರಕ್ಷಕರಾಗಿದ್ದ ಮಡಿವಾಳ ಮಾಚಿದೇವ

ಆಲೂರು : ಸಮಾಜದ ಅಭಿವೃದ್ಧಿಗೆ ಮಡಿವಾಳ ಮಾಚಿದೇವರ ಕೊಡುಗೆ ಅಪಾರ. ಅವರ ದಾರಿಯಲ್ಲಿ ಎಲ್ಲರೂ ನಡೆಯಬೇಕಾದ ಅವಶ್ಯಕತೆಯಿದೆ ಎಂದು ಶಿರಸ್ತೇದಾರ್ ಅಂಕೇಗೌಡ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮಡಿವಾಳ ಮಾಚಿದೇವ ಸಂಘದ ಸಹಯೋಗದಲ್ಲಿ ಪಟ್ಟಣದ ತಾಲೂಕು ಮಿನಿ ವಿಧಾನಸೌಧ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಶರಣರಾಗಿದ್ದ ಮಡಿವಾಳ ಮಾಚಿದೇವ ವಚನಗಳ ರಕ್ಷಕರಾಗಿದ್ದರು ಎಂದು ತಿಳಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಮಾತನಾಡಿ, ಬಸವಣ್ಣಸೇರಿದಂತೆ ಅನೇಕ ಶರಣರು ಸಮಸಮಾಜ ನಿರ್ಮಾಣಕ್ಕಾಗಿ ವಚನಗಳ ಮೂಲಕ ಜನರಲ್ಲಿರುವ ಅರಿವು ಮೂಡಿಸಿದ್ದಾರೆ. ಅಂತಹ ಮಹಾನ್ ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸಲ್ಲದು ಎಂದರು.

ಮುಖ್ಯ ಭಾಷಣಕಾರರಾಗಿ ರಮೇಶ್ ದಿಬ್ಬೂರು ಮಾತನಾಡಿ, ಮಡಿವಾಳ ಮಾಚಿದೇವರು ತಮ್ಮ ವಚನಗಳಲ್ಲಿ ಕಾಯಕಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡಿದ್ದು ಭಕ್ತಿ ಮತ್ತು ನಿಷ್ಟೆಯಿಂದ ಕಾಯಕದಲ್ಲಿ ನಿರತರಾದರೆ ದೇವರು ಸಹ ಒಲಿಯುವನು ಎಂದು ಸಾರಿದ್ದಾರೆ. ನಡೆನುಡಿ ತಪ್ಪದೇ, ತತ್ವ ಸಿದ್ಧಾಂತವನ್ನು ಅನುಸರಿಸಿ ನಮ್ಮ ವ್ಯಕ್ತಿತ್ವವನ್ನು ಉನ್ನತಗೊಳಿಸಬೇಕೆಂದು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ. ಶ್ರೀಸಾಮಾನ್ಯನಾಗಿದ್ದ ಮಡಿವಾಳ ಮಾಚಿದೇವರ ಜೀವನ ಸಂದೇಶದ ಕಥೆಯನ್ನು ಅರ್ಥಪೂರ್ಣವಾಗಿ ತಿಳಿಸಿದ ಅವರು 12ನೇ ಶತಮಾನದ ವಚನ ಕ್ರಾಂತಿಯೂ ಕನ್ನಡಕ್ಕೆ ದೊಡ್ಡ ಸಂಪತ್ತು ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ನಿರ್ಮಿತಾ ಭರತನಾಟ್ಯ ಪ್ರದರ್ಶನ ಮಾಡಿ ಗಮನ ಸೆಳೆದಳು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವರದರಾಜು, ಹಿಂದುಳಿದ ವರ್ಗಗಳ ಹಿರಿಯ ಮುಖಂಡ ಬಿ.ಸಿ.ಶಂಕರಾಚಾರ್, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ತಾಲೂಕು ಸಂಚಾಲಕ ಮುಖಂಡ ಬಸವರಾಜ್ ಗೇಕರವಳ್ಳಿ, ನಿವೃತ್ತ ಶಿಕ್ಷಕರಾದ ಮುತ್ತಣ್ಣ, ಬೆಳ್ಮೆ ನಂಜಪ್ಪ, ಗುಲಾಮ್ ಸತ್ತಾರ್, ಮಡಿವಾಳ ಸಂಘದ ತಾಲೂಕು ಉಪಾಧ್ಯಕ್ಷ ಮೋಹನ್ ಹೊನ್ನವಳ್ಳಿ, ಕಾರ್ಯದರ್ಶಿ ಪ್ರದೀಪ್ ಸೇರಿದಂತೆ ತಾಲೂಕಿನ ಎಲ್ಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.