ಜಿಲ್ಲೆ

ವಚನಗಳ ಪ್ರತಿ ಸಾಲಿನಲ್ಲೂ ಜೀವನ ಸಂದೇಶ

ಮೈಸೂರು: ವಚನ ಸಾಹಿತ್ಯ ಬದುಕಿಗೆ ಬೇಕಾದ ಎಲ್ಲ ಅಂಶವನ್ನು ಒಳಗೊಂಡಿದೆ ಎಂದು ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎ.ಆರ್.ಮದನಕುಮಾರ್ ಹೇಳಿದರು.


ಶಿವರಾತ್ರೀಶ್ವರ ಧಾರ್ಮಿಕ ದತ್ತಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 304ನೇ ಶಿವಾನುಭವ ದಾಸೋಹ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯದಲ್ಲಿ ಜನಪರ ಚಿಂತನೆ’ ಕುರಿತು ಮಾತನಾಡಿದರು.


ಬಸವಾದಿ ಶರಣರು ನುಡಿದಂತೆ ನಡೆದು, ಎಲ್ಲ ಕೆಳಸ್ತರದ ಕಾಯಕ ಜೀವಿಗಳನ್ನು ಒಂದೆಡೆ ಸೇರಿಸಿ ಅನುಭವ ಮಂಟಪದ ಮೂಲಕ ಅನ್ನ, ಜ್ಞ್ಞಾನ, ಅರಿವನ್ನು ಮೊಟ್ಟಮೊದಲಿಗೆ ನೀಡಿದರು ಎಂದರು.


ಜನತೆಯನ್ನು ಸನ್ಮಾರ್ಗಕ್ಕೆ ತರಲು ಹಿಂದೆ ಹರಿಕಥೆ, ಪುರಾಣ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪ್ರಯತ್ನಿಸಲಾಗುತ್ತಿತ್ತು. ಆದರೆ, 12ನೇ ಶತಮಾನದ ಶಿವಶರಣರು ತಾವು ಮಾಡುವ ಕಾಯಕ ಸತ್ಯ, ಶುದ್ಧವಾಗಿರಬೇಕೆಂದರು. ಅದರಂತೆ ನಡೆದು ತಮ್ಮ ಅನುಭವವನ್ನು ಸಾಹಿತ್ಯದ ಮೂಲಕ ಕಟ್ಟಿಕೊಟ್ಟರು ಎಂದು ಹೇಳಿದರು.


ವಚನಗಳ ಒಂದೊಂದು ಸಾಲು ಒಂದೊಂದು ಸಂದೇಶವನ್ನು ನೀಡುತ್ತದೆ. ಮಹಿಳೆಯರಿಗೆ ಸಮಾನತೆ ಸಾರಿದ ಶರಣಧರ್ಮ, ದೇಹವನ್ನು ದೇಗುಲ ಮಾಡಿ ತನು, ಮನ ಶುದ್ಧ ಮಾಡಿದೆ. ಭಗವಂತನನ್ನು ಗುಡಿ ಗೋಪುರದಲ್ಲಿ ಕಾಣಲು ಸಾಧ್ಯವಿಲ್ಲ. ನಮ್ಮನ್ನು ನಾವು ಅರಿತಾಗ ಭಗವಂತನನ್ನು ಕಾಣಲು ಸಾಧ್ಯವೆಂದು ತೋರಿಸಿಕೊಟ್ಟವರು ಶರಣರು ಎಂದು ತಿಳಿಸಿದರು.


ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ಪ್ರಭಾರ ನಿರ್ದೇಶಕ ಕೆ.ಎಲ್.ರೇವಣ್ಣಸ್ವಾಮಿ, ಪ್ರೊ.ಪಿ.ಎಂ. ಮಹದೇವಸ್ವಾಮಿ ಇತರರಿದ್ದರು.