ಚಿಕ್ಕಮಗಳೂರು: ವಚನ ಧರ್ಮವು ಆಳವಾದುದು. ಇದಕ್ಕೆ ಎದಿರಾಗುವುದು ಸುಲಭವಲ್ಲ. ಹಾಗೆಯೇ ಅರಿತುಕೊಳ್ಳುವುದೂ ಸುಲಭವಲ್ಲ. ಶಾಂತವಾದದ್ದು, ಉದಾತ್ತವಾದದ್ದು, ಸಾಮಾನ್ಯ ತರ್ಕಕ್ಕೆ ಸಿಗಲಾರದ್ದು, ಸೂಕ್ಷö್ಮವಾದದ್ದು, ವಿವೇಕಿಗಳಿಗೆ ಮಾತ್ರ ದಕ್ಕುವಂತಹದ್ದು ವಚನ ಧರ್ಮ ಎಂದು ಸಾಹಿತಿ ರವೀಶ್ ಕ್ಯಾತನಬೀಡು ಅಭಿಪ್ರಾಯಪಟ್ಟರು.
ನಗರದ ಕೆ.ಎಂ.ರಸ್ತೆಯ ನಾಯ್ಡು ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ವಚನ ದರ್ಶನ ಮಿಥ್ಯ-ಸತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತು ಮಾತನಾಡಿದ ಅವರು, ವಚನ ತತ್ವವನ್ನು ತಿಳಿದುಕೊಳ್ಳುವ ಹಂಬಲ ಇದ್ದರೆ ಸಾಲದು ಅದನ್ನು ತಿಳಿದುಕೊಳ್ಳುವ ಸರಿಯಾದ ಮಾರ್ಗ ಹಿಡಿಯದ ಹೊರತು ಅದು ಸಾಧ್ಯವಿಲ್ಲ. ತಪ್ಪು ದಾರಿ ಹಿಡಿದು ಬಲು ದೂರ ಬಂದಾಗಿದೆ. ಅದೇ ದಾರಿಯಲ್ಲಿಯೇ ಮುಂದುವರೆಯುತ್ತೇನೆ ಮತ್ತು ವಚನ ಮಾರ್ಗದ ತತ್ವದ ದಾರಿಯನ್ನೇ ಹಿಡಿಯುತ್ತೇನೆ ಎಂದರೆ ಆಗದು. ಸರಿಯಾದುದ್ದನ್ನು ದಕ್ಕಿಸಿಕೊಳ್ಳಬೇಕಾದರೆ ಸರಿಯಿಲ್ಲದ ದಾರಿಯನ್ನು ತ್ಯಜಿಸಿ, ಸರಿಯಾದ ದಾರಿ ಹಿಡಿಯಬೇಕಾದದ್ದು ಅನಿವಾರ್ಯ ಎಂದು ಹೇಳಿದರು.
ಇತ್ತೀಚೆಗೆ ಅನೇಕರು ವಚನ ಸಾಹಿತ್ಯದ ತಾತ್ವಿಕತೆಯನ್ನು ದಿಕ್ಕುತಪ್ಪಿಸುವ ಕೆಲಸವನ್ನು ನಿರಂತರವಾಗಿ ನಡೆಸುತ್ತಿರುವುದು ದುರಂತ. ಪರೋಕ್ಷವಾಗಿ ಬ್ರಾಹ್ಮಣ್ಯದ ಹೇರಿಕೆಯ ಕ್ರಮವನ್ನು ಜರುಗಿಸುತ್ತಿರುವುದು ವಚನ ದರ್ಶನಕ್ಕೆ ಮಾಡುವ ಅಪಮಾನ. ಶತಮಾನದಿಂದಲೂ ಹೇರಿಕೆ ಕ್ರಮವನ್ನು ವಿರೋಧಿಸಿದ ವಚನಕಾರರು ಪ್ರಮಾಣ ನಿರಾಕರಣೆಯನ್ನು ಮಾಡುತ್ತಾ ವೇದ, ಆಗಮಗಳಿಗೆ ಓರೆ ಹಚ್ಚುವ ಮೂಲಕ ಪರಿಸರದ ವಿಜ್ಞಾನ, ಧರ್ಮವನ್ನು ನಮ್ಮ ನಡುವೆ ಬಿಟ್ಟು ಹೋಗಿದ್ದಾರೆ. ವಚನ ದರ್ಶನ ಪುಸ್ತಕದ ಹಿಂದೆ ಸ್ಥಾಪಿತ ಆರ್‌ಎಸ್‌ಎಸ್ ಇತರೆ ಸಂಘಟನೆಗಳು ಕೆಲಸ ಮಾಡುವಂತೆ ಕಾಣುತ್ತದೆ. ವಚನ ಸಾಹಿತ್ಯದ ನಡೆಕಾರರು ಇದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಹೇಳುವ ಮಿಥ್ಯವನ್ನು ಕಳೆದು ವಚನ ಸತ್ಯವನ್ನು ಹೇಳಬೇಕಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಪಂಡಿತರಾಧ್ಯ ಶ್ರೀಗಳು ಉಪನ್ಯಾಸ ನೀಡಿ, ನಮ್ಮ ಹೊರಗಿನ ಶತ್ರುಗಳನ್ನು ಅರಗಿಸಿಕೊಳ್ಳಬಹುದು ಆದರೆ ಒಳಗಿನ ಶತ್ರುಗಳು ಅಪಾಯಕಾರಿ. ವೇದ, ಆಗಮಗಳಲ್ಲಿ ಇರಬಹುದಾದ ಮನುಷ್ಯ ಶೋಷಿತ ನಡವಳಿಕೆಗಳ ವಿರುದ್ಧ ಕಾಯಕ ಧರ್ಮ, ದಾಸೋಹ ಧರ್ಮ, ಪ್ರಸಾದ ಧರ್ಮ, ಸ್ತಿçà ಸಮಾನತೆ, ಮೇಲು-ಕೀಳಿಲ್ಲದ ಶರಣ ಸಮಾಜವನ್ನು ಕಟ್ಟಿದವರು ಬಸವಾದಿ ಶರಣರು. ಹಿರಿಯ ಸಾಹಿತಿ ಎಂ.ಆರ್.ಶ್ರೀನಿವಾಸಮೂರ್ತಿ ಹೇಳುವಂತೆ ವಚನ ಸಾಹಿತ್ಯ ಎರವಲು ತಂದಿದ್ದಲ್ಲ. ಕನ್ನಡದ ಸ್ವಯಾರ್ಜಿತ ಸ್ವತ್ತು. ವಚನಕಾರರು ಸಂಸ್ಕೃತದ ಆಚಾರ್ಯರಲ್ಲ. ಬದಲಿಗೆ ಅವರು ಅಚ್ಚ ಕನ್ನಡದ ಬೇಸಾಯಗಾರರು. ವಚನ ದರ್ಶನ ಕನ್ನಡದ ಮೊಟ್ಟ ಮೊದಲ ಧರ್ಮ ಎಂದು ಹೇಳಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ವಚನಗಳು ನಮ್ಮ ಬದುಕಿನ ದೀವಿಗೆಗಳು. ಆ ದೀವಿಗೆಗಳ ಬೆಳಕಿನಲ್ಲಿ ಈ ಸಮಾಜವನ್ನು ಕರೆದುಕೊಂಡು ಹೋಗಬೇಕಾಗಿದೆ. ಸಮ ಸಮಾಜದ ನಿರ್ಮಾಣವನ್ನು ಮಾಡಿದವರು ವಚನಕಾರರು ಎಂದರು.
ಕಾರ್ಯಕ್ರಮದಲ್ಲಿ ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು ಹಾಗೂ ಬಸವ ಮಂದಿರದ ಡಾ.ಬಸವ ಮರುಳಸಿದ್ಧ ಶ್ರೀಗಳು ಮತ್ತು ಯಳನಾಡು ಮಠದ ಜ್ಞಾನಪ್ರಭು ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ವಿಭಾಗೀಯ ಮುಖ್ಯಸ್ಥರಾದ ಮಹಾದೇವಪ್ಪ, ನಿವೃತ್ತ ನ್ಯಾಯಾಧೀಶ ಕೆಂಪಣ್ಣ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗಂಗಾಧರ ಶಿವಪುರ, ಪ್ರಮುಖರಾದ ಕಡೂರು ವಿರೂಪಾಕ್ಷ ಮತ್ತಿತರರಿದ್ದರು.