ಜಿಲ್ಲೆ

ವಚನ ಸಾಹಿತ್ಯಗಳ ಅಭ್ಯಾಸ ಮಾಡಿದರೆ ನೈತಿಕ ಬಲ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ವಚನಗಳ ಅಭ್ಯಾಸ ಮಾಡಿದರೆ ನೈತಿಕ ಬಲವು ಹೆಚ್ಚುವ ಜತೆಗೆ ಜೀವನದಲ್ಲಿನ ಸರಿ ತಪ್ಪುಗಳ ವಿಮರ್ಶೆಗೆ ದಾರಿಯಾಗಲಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದರು.

ನಗರ ಪವಾಡ ಶ್ರೀಬಸವಣ್ಣ ದೇವರ ಮಠದಲ್ಲಿ ಶ್ರೀ ಬಸವೇಶ್ವರ ಆಂಗ್ಲ ಶಾಲೆಯಿಂದ ಅವಿರಳ ಜ್ಞಾನಿ ಚನ್ನಬಸಣ್ಣನವರ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಅಂತರ್ ಶಾಲಾ ವಚನ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ವಚನ ಸಾಹಿತ್ಯ ವಿಶ್ವದ ಮೇರು ಸಾಹಿತ್ಯವಾಗಿದೆ. ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಕಂದಾಚಾರ ಹಾಗೂ ಮೂಢನಂಬಿಕೆಗಳ ವಿರುದ್ಧ ಸಮರ ಸಾರಿ ಕ್ರಾಂತಿ ಉಂಟು ಮಾಡಿದ ಶರಣರ ವಚನಗಳು ಆಧ್ಯಾತ್ಮದ ನೆಲೆಯೊಳಗೆ ಬದುಕಿನ ಸಾರ ತತ್ವವನ್ನು ಸಾರಿ ಜಟಿಲವಾಗಿದ್ದ ಮನುಷ್ಯನ ಬದುಕನ್ನು ಸರಳಗೊಳಿಸಿದೆ. ಬಸವಣ್ಣ, ಅಕ್ಕಮಾಹದೇವಿ, ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯನ ಆದರ್ಶಗಳು ಪ್ರತಿಯೊಬ್ಬರ ಜೀವನದ ಪಾಠಗಳಾಗಬೇಕಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೇವಲ ಪದವಿಗಳಿಗೆ ಸೀಮಿತವಾಗದೇ ಜೀವನದ ಪಾರಮಾರ್ಥಿಕ ಹಾಗೂ ಲೌಕಿಕ ಜ್ಞಾನ ನೀಡಬೇಕಿದೆ ಎಂದರು. ಹನ್ನೆರಡನೇ ಶತಮಾನದಲ್ಲಿದ್ದ ಜಾತಿ ಬೇಧ, ಮೇಲು - ಕೀಳೆಂಬ ಅಜ್ಞಾನದ ಕತ್ತಲನ್ನು ಕಳೆದು ವಚನಗಳ ಮೂಲಕ ಜ್ಞಾನದ ಬೆಳಕು ಸಾರಿದ ವಚನಕಾರರ ಸಂದೇಶಗಳು ಇಂದಿನ ಜನಮಾನಸಕ್ಕೆ ಅತಿ ಉಪಯುಕ್ತವಾಗಿದೆ. ಮನುಷ್ಯನ ಉತ್ತಮ ಜೀವನಕ್ಕೆ ಕಲಬೇಡ ಕೊಲಬೇಡ ಹುಸಿಯ ನುಡಿಯ ಬೇಡ ಎಂಬ ವಚನವೊಂದರ ಸಾರ ಸಾಕು ಎಂದರು.

ಶಿಕ್ಷಕಿಯರಾದ ಸುವರ್ಣ, ಮಮತಾ, ಲಘುಬಾಮಾಕ್ಷ್ಮೀ, ಲಾವಣ್ಯಾ, ಲಕ್ಷ್ಮಮ್ಮ, ಸುಮಾ, ಮೇಘನಾ, ಪೂಜಾ, ಹರ್ಷ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕಿ ಪೂರ್ಣಿಮಾ ಉಪಸ್ಥಿತರಿದ್ದರು.

ಬಹುಮಾನ ವಿತರಣೆ: ತಾಲೂಕಿನ 11 ಶಾಲೆಗಳ 117 ವಿದ್ಯಾರ್ಥಿಗಳು ಅಂತರ್ ಶಾಲಾ ವಚನ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪಿಆರ್‌ಜಿ ಕೆಜಿ ವಿಭಾಗ, ಎಲ್‌ಕೆಜಿ ವಿಭಾಗ ಸೇರಿ ಯುಕೆಜಿ ವಿಭಾಗದ ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆ ನಡೆಯಿತು. ಪ್ರಥಮ ಬಹುಮಾನ 5ಸಾವಿರ ರೂಪಾಯಿ, ದ್ವಿತೀಯ ಬಹುಮಾನ 3ಸಾವಿರನಗದು, ತೃತೀಯ ಬಹುಮಾನ 2 ಸಾವಿರ ನಗದು ಜತೆಗೆ 9 ಮಂದಿ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ 1 ಸಾವಿರ ರೂಪಾಯಿ ನೀಡಿ ಗೌರವಿಸಲಾಯಿತು.

ಜತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಂಸಾಪತ್ರ ನೀಡಲಾಯಿತು.