ಜಿಲ್ಲೆ

ವಚನ ಸಾಹಿತ್ಯಕ್ಕೆ ಮುನ್ನುಡಿ ಬರೆದ ದೇವರ ದಾಸಿಮಯ್ಯ

ಚಿತ್ರದುರ್ಗ: ಹತ್ತನೇ ಶತಮಾನದಲ್ಲಿ ಸಂಸ್ಕೃತ, ಹಳೆಗನ್ನಡದ ಬದಲು ಆಡುನುಡಿ ಕನ್ನಡದಲ್ಲಿ ವಚನ ಸಾಹಿತ್ಯ ರಚನೆಗೆ ದೇವರ ದಾಸಿಮಯ್ಯ ಮುನ್ನುಡಿ ಹಾಕಿಕೊಟ್ಟರು. ಹೀಗಾಗಿ ಅವರನ್ನು ಆದ್ಯ ವಚನಕಾರ ಎಂದು ಕರೆಯಲಾಗುತ್ತದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪಂಡಿತರ ಸಾಹಿತ್ಯವನ್ನು ಪಾಮರರ ಭಾಷೆಯಲ್ಲಿ ದಾಸಿಮಯ್ಯ ಹೇಳಿದರು. ನೇಕಾರಿಕೆ ವೃತ್ತಿ ಮಾಡುತ್ತಲೇ ವಚನಗಳನ್ನು ರಚಿಸಿದರು. ಸಮಾಜದ ಅಂಕುಡೊಂಕು, ಕಂದಾಚಾರ, ಮೂಢನಂಬಿಕೆಗಳನ್ನು ತಿದ್ದಿದರು. ಭಕ್ತಿ, ಜ್ಞಾನ, ಅನ್ನ ದಾಸೋಹ ಮೂಲಕ ಸಮಾಜ ಸೇವೆ ಮಾಡಿದ್ದರು. ಇಂಥ ಮಹಾನುಭಾವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರವೃತ್ತಿಗೆ ವಿಷಾದಿಸಿದರು.

ತಂತ್ರಜ್ಞಾನದಿಂದ ಕೈಮಗ್ಗಗಳು ಮೂಲೆ ಸೇರುತ್ತಿವೆ. ನೇಕಾರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರದ ಮೀಸಲಾತಿ ಸದುಪಯೋಗ ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಸ್ಥಾನಮಾನಕ್ಕಾಗಿ ಮಕ್ಕಳಿಗೆ ಕೌಶಲ ತರಬೇತಿ ನೀಡಬೇಕು ಎಂದರು.

ಜಿಲ್ಲಾ ನೇಕಾರ ಒಕ್ಕೂಟ ಚಿತ್ರದುರ್ಗದಲ್ಲಿ ವಿದ್ಯಾರ್ಥಿ ನಿಲಯ, ನೇಕಾರಿಕೆ ಉದ್ದಿಮೆಗೆ ನಿವೇಶನ ಹಾಗೂ ಯಾದಗಿರಿಯ ಮುದನೂರು ಗ್ರಾಮದಲ್ಲಿ ದೇವರದಾಸಿಮಯ್ಯ ಪ್ರಾಧಿಕಾರ ರಚನೆ ಕುರಿತ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಾಗುವುದು. ನಗರದ ಒಂದು ರಸ್ತೆಗೆ ದೇವರ ದಾಸಿಮಯ್ಯ ಹೆಸರಿಡಲು ಚರ್ಚಿಸಿ ಕ್ರಮ ಕೈಗೊಳ್ಳಲು ನಗರಸಭೆಗೆ ಸೂಚಿಸುವುದಾಗಿ ತಿಳಿಸಿದರು.

ದಾವಣಗೆರೆ ಸಿದ್ದಗಂಗಾ ಪಪೂ ಕಾಲೇಜಿನ ಉಪನ್ಯಾಸಕ ಸಂತೋಷ್ ಮಾತನಾಡಿ, ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಕನ್ನಡದ ಶ್ರೇಷ್ಠ ಕೊಡುಗೆಯಾಗಿದೆ. ಇಂತಹ ಸಾಹಿತ್ಯಕ್ಕೆ ಮುನ್ನುಡಿ ಬರೆದವರು ದಾಸಿಮಯ್ಯ. ವಚನ ಸಾಹಿತ್ಯ ವೇದ ಉಪನಿಷತ್‌ಗಳ ಸಾರವಲ್ಲ. ಮೂಢನಂಬಿಕೆ, ಕಂದಾಚಾರ, ಜಾತಿವ್ಯವಸ್ಥೆ ಹಾಗೂ ಮೇಲ್ವರ್ಗದ ಯಜಮಾನಿಕೆ ವಿರುದ್ಧ ಹುಟ್ಟಿಕೊಂಡ ದೇಸಿ ಸಾಹಿತ್ಯವಾಗಿದೆ. ರಾಜಮನೆತನಗಳಿಗೆ ಸೀಮಿತವಾಗಿದ್ದ ಸಾಹಿತ್ಯ, ಸಂಸ್ಕೃತಿ ಹಾಗೂ ಉತ್ತಮ ಜೀವನ ಪದ್ಧತಿಯನ್ನು ಜನಸಾಮಾನ್ಯರಿಗೂ ವಚನ ಸಾಹಿತ್ಯ ದೊರಕಿಸಿ ಕೊಟ್ಟಿದೆ ಎಂದು ತಿಳಿಸಿದರು.

ದಾಸಿಮಯ್ಯ ಅವರು ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಗೆ ಪ್ರೇರಣೆಯಾಗಿದ್ದರು. ದೇವರ ಹಾಗೂ ಜೇಡರ ದಾಸಿಮಯ್ಯ ಬೇರೆ, ಬೇರೆ ಎನ್ನುವ ವಾದಗಳಿದ್ದವು. ಆದರೆ, ಬಹುತೇಕ ವಿದ್ವಾಂಸರು ದೇವರ ಹಾಗೂ ಜೇಡರ ದಾಸಿಮಯ್ಯ ಇಬ್ಬರು ಒಂದೇ ಎಂದಿದ್ದಾರೆ. ಮುದನೂರಿನ ರಾಮಯ್ಯ ಹಾಗೂ ಶಂಕರಿ ಅವರ ಪುತ್ರ ದಾಸಿಮಯ್ಯ, ನೇಕಾರ ಕಾಯಕ ಮಾಡುತ್ತಾ ತಮ್ಮ ನಡೆ ಹಾಗೂ ವ್ಯಕ್ತಿತ್ವ ರೂಪಿಸಿಕೊಂಡವರು. ರಾಮನಾಥ ಎಂಬ ಅಂಕಿತ ನಾಮದೊಂದಿಗೆ ರಚಿಸಿರುವ ಅವರ ವಚನಗಳ ಪೈಕಿ 176ಕ್ಕೂ ಹೆಚ್ಚು ಬರಹಗಳು ಲಭ್ಯವಾಗಿವೆ ಎಂದರು.

ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ. ಗೋವಿಂದಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್, ಚಂದ್ರಶೇಖರ್, ನಾರಾಯಣ್, ಎನ್.ಆರ್. ಶಶಿಧರ್, ಹೊಂಬಕ್ಕ, ಶ್ರೀದೇವಿ, ರಘು, ಮಂಜುನಾಥ ಮತ್ತಿತರ ಮುಖಂಡರು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಇತರರು ಇದ್ದರು.

ಹೊಸದುರ್ಗದ ಶಬೀನಾಬಾನು ಕಲಾ ತಂಡ ಗೀತಗಾಯನ ಪ್ರಸ್ತುತ ಪಡಿಸಿತು.