ವಿಜಯವಾಣಿ ಸುದ್ದಿಜಾಲ ಧಾರವಾಡ
ವಚನ ಸಾಹಿತ್ಯವನ್ನು ರಕ್ಷಿಸಿ ಅದಕ್ಕೆ ಬೆಳಕು ನೀಡಿದ ಮಹಾನ ಶರಣ ಡಾ. ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕಿತ್ತೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಿರಿಯ ತರಬೇತಿ ಅಧಿಕಾರಿ ಉಮಾ ಬಾಗಲಕೋಟ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಜನ್ಮದಿನ ಪ್ರಯುಕ್ತ ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನಗಳ ರಕ್ಷಣೆಯೊಂದಿಗೆ ಗುಣಮಟ್ಟದ ಎಲ್ಲ ವಚನಗಳನ್ನು ವರ್ಗೀಕರಿಸಿ, ಅನುವಾದಿಸಿ ಪ್ರಕಟಿಸಿದ್ದಾರೆ. ಕಾಯಕ ನಿಷ್ಠೆ, ಧರ್ಮಾಭಿಮಾನ ಬೆಳೆಸಿಕೊಂಡಿದ್ದ ಅವರ ಜೀವನವೇ ಒಂದು ವಚನವಾಗಿತ್ತು. ವಚನಗಳನ್ನು ಜನರಿಗೆ ತಿಳಿಸಲು ಹಿತ ಚಿಂತಕ ಮುದ್ರಣಾಲಯದ ಮೂಲಕ ವಚನಗಳ ಪ್ರತಿಗಳನ್ನು ಮುದ್ರಿಸಿದರು. ಶಿವಾನುಭವ ಮತ್ತು ನವ ಕರ್ನಾಟಕ ಪತ್ರಿಕೆಗಳ ಮೂಲಕ ವಚನಗಳ ಮಹತ್ವ ತಿಳಿಸಿದ್ದಾರೆ. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ ಮತ್ತು ಇತರ ಶರಣರ ವಚನಗಳ ಪುಸ್ತಕಗಳನ್ನು ಮುದ್ರಿಸಿದ್ದಾರೆ. ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಅವರ ಶ್ರಮ ದೊಡ್ಡದು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಚನ ಸಾಹಿತ್ಯ ಸಂಶೋಧಕ ಡಾ. ವೀರಣ್ಣ ರಾಜೂರ ಮಾತನಾಡಿ, ಡಾ. ಫ.ಗು. ಹಳಕಟ್ಟಿ ವಚನ ಸಾಹಿತ್ಯ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಕಷ್ಟದ ಜೀವನದಲ್ಲೂ ಏಕಚಿತ್ತದಿಂದ ವಚನಗಳ ಸಂಗ್ರಹಣೆಯಲ್ಲಿ ತೊಡಗಿದ್ದರು. ಬಸವಣ್ಣನವರ ಕಾಯಕ ತತ್ವ ಅಳವಡಿಸಿಕೊಂಡು ಜೀವನದುದ್ದಕ್ಕೂ ಬದುಕಿದವರು ಎಂದರು.
ಡಾ. ದ.ರಾ. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಈಶ್ವರ ಕಡ್ಲಿಮಟ್ಟಿ, ಬಸವರಾಜ ಕೊಂಗಿ, ಶಿವರಾಜ ಧಾರವಾಡ, ಆರ್.ಜೆ. ಅಕ್ಕಿಹಾಳ, ಸದಾನಂದ ಶಾಂತಪ್ಪ ಹಳಕಟ್ಟಿ, ಸಮಾಜದ ಮುಖಂಡರು, ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ವಂದಿಸಿದರು.