ಜಿಲ್ಲೆ

ವಚನ ಸಾಹಿತ್ಯ ವಿಶ್ವದ ಶ್ರೇಷ್ಠ ಸಂವಿಧಾನ:ಶ್ರೀ ವಿಜಯಕುಮಾರ ಮಹಾಸ್ವಾಮೀಜಿ

Hassan - Ramesh H R

ಹಾಸನ: ವಚನ ಮತ್ತು ಸಂವಿಧಾನ ಎರಡೂ ಒಂದೇ. ಅವು ಬೇರೆ, ಬೇರೆ ಅಲ್ಲ. ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿವೆ. ದೇಶದ ಪ್ರಗತಿಗೆ ವಚನ ಸಾಹಿತ್ಯ ಮತ್ತು ಸಂವಿಧಾನದ ತತ್ವಗಳು ಎರಡೂ ಮುಖ್ಯ ಎಂದು ಹಾಸನ ತಣ್ಣೀರುಹಳ್ಳ ಮಠದ ಪರಮಪೂಜ್ಯ ಶ್ರೀ ವಿಜಯಕುಮಾರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ತಣ್ಣೀರುಹಳ್ಳ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿಯವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ, ಸ್ವಾತಂತ್ರ್ಯ ನೀಡಿದೆ ಎಂಬುದನ್ನು ಮರೆತ ಕೆಲ ಸಂಪ್ರದಾಯವಾದಿಗಳು ಸಮಾನತೆಯ ತತ್ವವಾದ ಸಂವಿಧಾನವನ್ನು ಸುಡುವ, ಅಗೌರವಿಸುವವ ಅಜ್ಞಾನಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಶರಣ ಸಾಹಿತ್ಯ ಪರಿಷತ್ತು ರಾಜ್ಯ ಸಂಚಾಲಕರು ಮತ್ತು ಸಾಹಿತಿ ಸುಶೀಲಾ ಸೋಮಶೇಖರ್ ಮಾತನಾಡಿ, ಶರಣ ಸಾಹಿತ್ಯ ನಾಡಿನ ಜನ ಮನಕ್ಕೆ ಅರಿವು ಮೂಡಿಸಬೇಕು ಹಾಗೂ ಶರಣರ ಆದರ್ಶಗಳು ಮತ್ತು ಆಚರಣೆಗಳನ್ನು ಪ್ರಪಂಚದಾದ್ಯಂತ ಹರಡುವ ದೃಷ್ಟಿಕೋನದಿಂದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರು 1986ರ ಆ.29ರಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡುವ ಮೂಲಕ ಇಂದು ನಾಡಿನಲ್ಲಿ ವಚನ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು.
ಹಾಸನ ಸಿದ್ದೇಶ್ವರ ಐಟಿಐ ಕಿರಿಯ ತರಬೇತಿ ಅಧಿಕಾರಿ ಹಗರೆ ಅಹಮದ್ ಮಾತನಾಡಿ, ವಚನಕಾರರು ಸಮಾಜದಲ್ಲಿದ್ದಂತಹ ರಾಜಪ್ರಭುತ್ವ, ಅಂಧಾನುಕರಣೆ, ಮೌಢ್ಯಗಳು, ಕಂದಾಚಾರಗಳು, ಲಿಂಗ ತಾರತಮ್ಯ, ವೃತ್ತಿ ತಾರತಮ್ಯ, ವರ್ಗ ಬೇದ, ಭಾಷಾ ವೈಷಮ್ಯಗಳು ಹಲವು ದೈವಗಳ ಆರಾಧನೆ ಧರ್ಮ, ಧರ್ಮಗಳಲ್ಲಿದ್ದ ಕಚ್ಚಾಟ ಮುಂತಾದವುಗಳನ್ನು ಸರಿಪಡಿಸಲು ತಮ್ಮದೆಯಾದ ದಾಟಿಯಲ್ಲಿ ವಚನಗಳನ್ನು ಹೇಳುತ್ತಾ ಸಮಾಜ ಸುಧಾರಿಸಿದರು. ವಚನಗಳಲ್ಲಿ ಕಂಡು ಬರುವ ವಿಶಿಷ್ಟ ಮೌಲ್ಯಗಳಲ್ಲಿ ಬಹುತೇಕ ಮನುಷ್ಯನ ನಡಾವಳಿಗಳು, ಬದುಕುವ ರೀತಿ, ನೀತಿ ಸಮಾಜದ ಅಂಕು-ಡೊಂಕು ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತ , ಅನುಭವಗಳ ಮತ್ತು ಅನುಭಾವದ ಅಭಿವ್ಯಕ್ತಿ ಮಾಧ್ಯಮವನ್ನಾಗಿ ವಚನವನ್ನು ಜನಸಂಪರ್ಕ ಮಾಧ್ಯಮವನ್ನಾಗಿ ಮಾನವೀಯ ನೆಲೆಯಲ್ಲಿ ಬಳಸಿದ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವಿಲೆ ಪರಮೇಶ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಮನಾಥಪುರ ಕುಮಾರಸ್ವಾಮಿ, ಹಾಸನ ಜಿಲ್ಲಾ ಕದಳಿ ಮಹಿಳಾ ಘಟಕದ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದನ ಕುಮಾರ್, ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಅರಕಲಗೂಡು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಮೃತೇಶ್, ಪ್ರಾಂಶುಪಾಲ ತುಂಗರಾಜು, ಮುಖ್ಯ ಶಿಕ್ಷಕ ಕಲ್ಲಿನ ದೇವರಾಜ ಶಾಸ್ತ್ರಿ, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಪ್ರಸಾದ್, ಚಿದಾನಂದ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.