Oplus_131072 
ಜಿಲ್ಲೆ

ವಚನ ಸಾಹಿತ್ಯ ಜೀವಂತಿಕೆಗೆ ಮಡಿವಾಳ ಮಾಚಿದೇವ ಕಾರಣ

ಯಳಂದೂರು: ವಚನ ಸಾಹಿತ್ಯವನ್ನು ಇಂದಿಗೂ ಜೀವಂತವಾಗಿರುವುದಕ್ಕೆ ಮಡಿವಾಳ ಮಾಚಿದೇವರೇ ಕಾರಣ. ಅಂದಿನ ಪುರೋಹಿತ ಶಾಹಿಯಿಂದ ವಚನಗಳನ್ನು ಸಂರಕ್ಷಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಶಿಕ್ಷಕ ಬಿ.ಎಸ್.ವಿನಯ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನರಾಗಿದ್ದ ಮಡಿವಾಳ ಮಾಚಿದೇವ ಬಸವಣ್ಣ, ಬಿಜ್ಜಳರ ತಪ್ಪನ್ನೂ ನೇರವಾಗಿ ಖಂಡಿಸುತ್ತಿದ್ದರು. ಆ ಕಾಲಮಾನದಲ್ಲಿ 1.96 ಲಕ್ಷ ಶಿವ ಶರಣರು ಇದ್ದರು. 160 ಕೋಟಿ ವಚನಗಳು ರಚನೆಯಾಗಿದ್ದವು ಎಂಬ ಉಲ್ಲೇಖವಿದೆ. ಆದರೆ ನಮಗೆ ಲಭ್ಯವಿರುವ ವಚನಗಳು ಕೇವಲ 20 ಸಾವಿರವಾಗಿದ್ದು, 259 ವಚನಕಾರರು ಇದ್ದರು ಎಂಬುದಕ್ಕೆ ಸಾಕ್ಷ್ಯಗಳಿವೆ. ಅಂದಿನ ಕಾಲಮಾನದಲ್ಲಿ ಬಸವಣ್ಣನವರ ಕಾಲಾನಂತರ ಪುರೋಹಿತಶಾಹಿ ವರ್ಗ ವಚನಗಳನ್ನು ನಾಶ ಮಾಡಿತ್ತು ಎಂದು ಐತಿಹಾಸಿಕ ದಾಖಲೆಗಳಿವೆ. ಆ ದಿನಮಾನದಲ್ಲಿ ಇಂತಹ ವಚನಗಳನ್ನು ಚೆನ್ನಬಸವಣ್ಣರ ಜತೆಗೂಡಿ ನಾಗಮ್ಮ ಅವರ ಬೆನ್ನಿಗೆ ಕಟ್ಟಿಕೊಂಡು ಮಾಚಿದೇವ ಕಾಡಿನ ಗುಹೆಗಳಲ್ಲಿ ಇದನ್ನು ರಕ್ಷಣೆ ಮಾಡಿದ್ದರು ಎಂದು ಇತಿಹಾಸ ತಿಳಿಸುತ್ತದೆ. ಕಾಯಕ ತತ್ವ, ನಿಷ್ಠೆ ಪ್ರತಿಪಾದಿಸಿ, ಅದರಂತೆ ನಡೆದು, ಸದಾ ತನ್ನ ಬಳಿ ಖಡ್ಗವನ್ನು ಇರಿಸಿಕೊಂಡು ಇದರ ರಕ್ಷಣೆ ನಿಂತ ಮಾಚಿದೇವ ವಚನ ಸಾಹಿತ್ಯವನ್ನು ಕಾಪಾಡುವ ದಂಡನಾಯಕರಂತೆ ನಮಗೆ ಗೋಚರಿಸುತ್ತಾರೆ. ಇಂತಹ ಮಹಾನ್ ನಾಯಕರ ಜಯಂತಿಗಳನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸದೆ ಎಲ್ಲರೂ ಆಚರಿಸುವಂತಾಗಬೇಕು ಎಂದರು.

ಗ್ಯಾರಂಟಿ ಯೋಜನೆ ಪ್ರತಿಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಮಾತನಾಡಿ, ಮಡಿವಾಳ ಸಮುದಾಯ ಇನ್ನೂ ಕೂಡ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಈ ಸಮುದಾಯ ಚಿಕ್ಕ ಸಮುದಾಯವಾಗಿದ್ದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ತಮ್ಮ ಮಕ್ಕಳನ್ನು ಓದಿಸುವ ಕಡೆ ಹೆಚ್ಚಿನ ಗಮನ ನೀಡಬೇಕು. ಸರ್ಕಾರ ನೀಡಿರುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ತಹಸೀಲ್ದಾರ್ ಜಯಪ್ರಕಾಶ್, ಪಪಂ ಸದಸ್ಯ ಮಹೇಶ್, ವೈ.ಜಿ.ರಂಗನಾಥ, ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ, ಮಡಿವಾಳ ಮಾಚಿದೇವರ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಉಮೇಶ್, ಯದುಗಿರಿ, ದೈಹಿಕ ಪರಿವೀಕ್ಷಕ ಶಾಂತರಾಜು ಮುಖಂಡರಾದ ನಾಗರಾಜು, ಮಹೇಶ್, ರಂಗಸ್ವಾಮಿ ಮಾಕಿ ಸೇರಿದಂತೆ ಅನೇಕರು ಇದ್ದರು.