ಭಾಲ್ಕಿ ಬಸವಾದಿ ಶಿವಶರಣರ ಅಪ್ಪಟ ಅನುಯಾಯಿಯಾಗಿ ಬಸವ ತತ್ವ ಮತ್ತು ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಕೊಡುಗೆ ದೊಡ್ದದಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ವಚನ ಜಾತ್ರೆ-೨೦೨೫ ಮತ್ತು ಡಾ.ಚನ್ನಬಸವ ಪಟ್ಟದ್ದೇವರ ೨೬ನೇ ಸ್ಮರಣೋತ್ಸವ ನಿಮಿತ್ತ ಗುರುವಾರ ಸಂಜೆ ಆಯೋಜಿಸಿದ್ದ ಶರಣರು ಕಂಡ ಬಸವಣ್ಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಡಿಭಾಗದಲ್ಲಿ ಶತಾಯಷಿ ಪಟ್ಟದ್ದೇವರು ೧೦೯ ವರ್ಷಗಳ ಕಾಲ ಗಂಧದಂತೆ ಬದುಕು ಸವೆದು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆಗೈದಿದ್ದಾರೆ ಎಂದರು.
ಅಂಥ ಪೂಜ್ಯರು ನಡೆದಾಡಿದ ನೆಲದಲ್ಲಿ ನಾವೆಲ್ಲರೂ ಜನ್ಮತಾಳಿರುವುದು ನಮ್ಮ ಪುಣ್ಯವೆಂದು ಭಾವಿಸಿದ್ದೇನೆ. ಶ್ರೀಗಳ ಬದುಕು ಪ್ರೇರಣೆಯಾಗಿದೆ. ಅವರ ಚಿಂತನೆ, ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಿ ಸಾರ್ಥಕ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಚನ ಜಾತ್ರೆ-೨೦೨೫ ಮತ್ತು ಶತಾಯಷಿ ಡಾ.ಪಟ್ಟದ್ದೇವರು ಸ್ಮರಣೋತ್ಸವ ಅಂಗವಾಗಿ ಶರಣರು ಕಂಡ ಬಸವಣ್ಣ ವಿಷಯದ ಕುರಿತು ಏ.೨೧ರ ವರೆಗೆ ಪ್ರವಚನ ಏರ್ಪಡಿಸಲಾಗಿದೆ. ಪ್ರತಿದಿನ ಸಾಯಂಕಾಲ ೬ ಗಂಟೆಗೆ ನಡೆಯುವ ಪ್ರವಚನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಬೆಳಗಾವಿ-ಯಮಕನಮರಡಿ ಹುಣಸಿಕೊಳ್ಳ ಜಗದ್ಗುರು ಶೂನ್ಯ ಸಂಪಾದನಾ ಮಠದ ಉತ್ತರಾಧಿಕಾರಿ ಶ್ರೀ ಸಿದ್ಧಬಸವ ದೇವರು ಶರಣರು ಕಂಡ ಬಸವಣ್ಣ ವಿಷಯದ ಕುರಿತು ಪ್ರವಚನ ನೀಡಿದರು.
ಮಸ್ಕತ್ ಕರ್ನಾಟಕ ಸಂಘದ ಮಾಜಿ ಸಲಹೆಗಾರ ಭೀಮ ನೀಲಂಕಠರಾವ ಹಂಗರಗೆ ಬಸವ ಗುರುವಿನ ಪೂಜೆ ನೆರವೇರಿಸಿದರು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬಸವ ಮುರಘೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ರೇಖಾ ಮಹಾಜನ ಇತರರಿದ್ದರು. ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ಅಶೋಕ ವಾಲೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು. ವೀರಣ್ಣ ಕುಂಬಾರ ವಂದಿಸಿದರು.
ಸಿದ್ಧಬಸವ ದೇವರು ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಅಂಥ ಪೂಜ್ಯರು ಶರಣರು ಕಂಡ ಬಸವಣ್ಣ ವಿಷಯದ ಕುರಿತು ಪ್ರವಚನದ ಮೂಲಕ ಜ್ಞಾನ ದಾಸೋಹ ನೀಡುತ್ತಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಆಲಿಸಬೇಕು.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು