ಜಿಲ್ಲೆ

ವಚನ ಸಾಹಿತ್ಯ ಕನ್ನಡ ಭಾಷೆಯ ಗಟ್ಟಿ ಬೇರು

ಬಾಗಲಕೋಟೆ: ವಚನ ಸಾಹಿತ್ಯಕ್ಕೆ ತನ್ನದೆಯಾದ ಇತಿಹಾಸ ಹೊಂದಿದೆ. ಇಂಗ್ಲೀಷ್ ಭಾಷೆ ಜನ್ಮ ತಾಳುವದಕ್ಕೂ ಮೊದಲು ವಚನ ಸಾಹಿತ್ಯ ಹುಟ್ಟಿಕೊಂಡಿತ್ತು. ಜಗತ್ತಿನ ಚಿಂತಕರೊಂದಿಗೆ ವಚನ ಸಾಹಿತ್ಯ ಮುಖಾಮುಖಿಯಾಗಲಿಲ್ಲ. ಪರಿಣಾಮ ಸಿಮೀತ ಪ್ರದೇಶಕ್ಕೆ ಒಳಗಾಯಿತು. ಇಂದು ವಿಶ್ವಮಟ್ಟದ ಎತ್ತರಕ್ಕೆ ಕೊಂಡ್ಯೊಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಖ್ಯಾತ ಸಾಹಿತಿ ಡಾ.ರಾಜಶೇಖರ ಮಠಪತಿ ಹೇಳಿದರು.
ನಗರದ ವಿದ್ಯಾಗಿರಿ ಕುಮಾರೇಶ್ವರ ವಿಶ್ವ ಧರ್ಮ ಶಾಂತಾಶ್ರಮ ಸಾಯಿ ಮಂದಿರದ ಭಕ್ತಿ ಭವನದಲ್ಲಿ ಶುಕ್ರವಾರ ಕರ್ನಾಟಕ ವಚನ ಸಾಹಿತ್ಯ ಪರಿಷತ್ತ ರಾಜ್ಯ, ಜಿಲ್ಲಾ ಘಟಕದ ಆಶ್ರಯದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ ದ್ವಿತೀಯ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ವಚನಗಳು ನಮಗೆ ಧಾರ್ಮಿಕತೆ, ಜೀವನ ಕ್ರಮ ಕಲಿಸುತ್ತದೆ. ಧಾರ್ಮಿಕತೆ ಅನಂತರವಾಗಿದೆ. ಸೀಮಾತಿತವಾಗಿದೆ. ಧರ್ಮವನ್ನು ಕಲಿಸುವದಿಲ್ಲ. ವಚನಗಳು ಆತ್ಮ ಪ್ರದೀಪ ಇದ್ದ ಹಾಗೆ. ಯಾರ ಆಸ್ತಿಯು ಅಲ್ಲ. ಮನುಷ್ಯತ್ವದಲ್ಲಿ ಅಡಗಿದೆ. ವಚನಗಳನ್ನು ಜನ ಸಾಮಾನ್ಯರ ಭಾಷೆಯಾಗಿ ಬಳಸಲಾಗಿದೆ ಎಂದರು.
೧೨ ನೇ ಶತಮಾನದಲ್ಲಿ ಇಂಗ್ಲೀಷ ಇರಲಿಲ್ಲ. ಆದರೇ ಅಣ್ಣ ಬಸವಣ್ಣ ನೇತೃತ್ವದಲ್ಲಿ ಶರಣರು ವಚನ ಸಾಹಿತ್ಯ ರಚನೆ ಮಾಡಿದ್ದರು. ಇಂಗ್ಲೀಷ ಭಾಷೆ ಜನ್ಮ ತಾಳಿದ್ದು ೧೪ ನೇ ಶತಮಾನದಲ್ಲಿ. ಬದುಕಿಗೆ ಇಂಗ್ಲೀಷ ಬೇಕು ಎನ್ನುವುದು ದುರಂತ ಸಂಗತಿ. ಜಗತ್ತಿನ ಚಿಂತಕರೊಂದಿಗೆ ವಚನ ಸಾಹಿತ್ಯ ಮುಖಾಮುಖಿಯಾಗಲಿಲ್ಲ. ಆದ್ದರಿಂದ ಸಿಮೀತವಾಗಿ ಉಳಿದುಕೊಂಡಿತು. ವಾಕ್ಯಗಳನ್ನು ತಪ್ಪಾಗಿ ಬರೆದಿಲ್ಲ. ರಚನೆಯಾಗಿಲ್ಲ. ನಮಗೆ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಇಳಕಲ್ಲ-ಚಿತ್ತರಗಿ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಕಟ್ಟುಗಳನ್ನು ವಿದೇಶಕ್ಕೆ ಹೋಗುವಾಗ ತೆರಿಗೆ ಕಟ್ಟು ಸಂದರ್ಭವಿತ್ತು. ಅನೇಕ ಶರಣರು ವಚನ ಸಾಹಿತ್ಯ ಪ್ರಚಾರಕ್ಕೆ ಕ್ರಿಶ್ಚಿಯನ್, ಮುಸ್ಲಿಂ ಪ್ರಾಭಲ್ಯವಿರುವ ದೇಶಗಳಿಗೆ ಹೋದರು. ವಚನ ಸಾಹಿತ್ಯ ಒಳ ಅರ್ಥ ಬಿಡಿಸಿ ಹೇಳಿದರು. ಉಳಿದೆಲ್ಲ ಧರ್ಮ ಗ್ರಂಥಗಳಿಗ್ಗಿಂತ ವಚನ ಸಾಹಿತ್ಯ ವಿಭಿನ್ನತೆ ಪರಿಚಯಿಸಿದರು. ಸಮಾನತೆ, ಕಾಯಕ, ದಾಸೋಹದ ಮಹತ್ವ ಸಾರಿದರು ಅಲ್ಲಿಯವರಿಗೂ ಅನಿಸಿತು. ಇದರಲ್ಲಿ ಇರುವ ಶಕ್ತಿ ಆಘಾದವಾಗಿದೆ ಅಂತ. ಇಂದು ನಮ್ಮ ಆಲೋಚನೆಗಳು ಬದಲಾಗಬೇಕಿದೆ. ಧನಾತ್ಮಕ ಚಿಂತನೆ ಬೇಕಿದೆ. ವಚನ ಸಾಹಿತ್ಯ ಮಾತೃ ಭಾಷೆಯಲ್ಲಿದೆ ಎನ್ನುವುದು ಹೆಮ್ಮೆಯ ಸಂಗತಿ. ಲಿಂಗಾಯತರು ಬಸವಣ್ಣವರ ನೇರ ವಾರಸುದಾರರು. ಈಚೆಗಿನ ದಿನಗಳಲ್ಲಿ ಬಸವಣ್ಣನ ಮಾತಿನಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿರೂರ ಮಹಾಂತ ತೀರ್ಥ ಬಸಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಜಮಖಂಡಿ ತಾಲೂಕಿನ ತುಂಗಳದ ಸಮ್ಮೇಳದ ಸರ್ವಾಧ್ಯಕ್ಷ ಮಲ್ಲಪ್ಪ ಸಿಂಧೂರ, ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ವಿ.ತ್ಯಾಗರಾಜ, ಅ.ಭಾ.ವೀ.ಲಿಂ ಮಹಸಭಾದ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ವಚನ ಸಾಹಿತ್ಯ ಪರಿಷತ್ತ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶಕುಮಾರ ಎಂ.ಎನ್., ಮಹಿಳಾ ಘಟಕದ ಅಧ್ಯಕ್ಷೆ ಸರ್ವಮಂಗಳಾ ಭಾರತಿ, ವಿಭಾಗೀಯ ಸಂಚಾಲಕ ಮಹಾಂತೇಶ ಗಜೇಂದ್ರಗಡ, ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ, ಸಂಗಣ್ಣ ಗದ್ದಿ ಇದ್ದರು. ಮಹಾಬಳೇಶ್ವರ ಗುಡಗುಂಟಿ ವಂದಿಸಿದರು. ಲಕ್ಷ್ಮೀ ಗೌಡರ ಸ್ವಾಗತಿಸಿದರು. ಪ್ರಭು ಮಾಲಗಿತ್ತಿಮಠ ನಿರೂಪಿಸಿದರು.