ಜಿಲ್ಲೆ

ವಚನ ಯುಗದ ಆಧ್ಯಾತ್ಮಿಕ ಚಿಂತನೆಗಳ ರೂವಾರಿ

ಬಳ್ಳಾರಿ : ಹನ್ನೆರಡನೆ ಶತಮಾನದ ವಚನ ಯುಗದ ಜನಸಾಮಾನ್ಯರಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತಿದವರು ಶಿವಶರಣ ಹಡಪದ ಅಪ್ಪಣ್ಣ ಎಂದು ಕಿಷ್ಕಿಂದ ವಿಶ್ವ ವಿದ್ಯಾಲಯದ ಪ್ರೊ.ಎಸ್.ಮಂಜುನಾಥ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಭಾನುವಾರ ನಡೆದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಹಡಪದ ಅಪ್ಪಣ್ಣನವರು ಪ್ರಸ್ತುತ ದಿನಮಾನಗಳ ಮನುಷ್ಯರ ಮನೋಭಾವನೆಯನ್ನು ಅಂದೇ ತಮ್ಮ ವಚನಗಳ ಮೂಲಕ ಸಾಬೀತು ಪಡಿಸಿದ್ದಾರೆ ಎಂದರು.
ಹಡಪದ ಅಪ್ಪಣ್ಣ ಅವರು ಯುವ ಕವಿಗಳ ಸ್ಪೂರ್ತಿ ಆಗಿದ್ದು, ಜೀವನದ ಬಗ್ಗೆ ಅರಿವು ಮೂಡಿಸುವ ಅವರ ವಚನಗಳೆ ನಿದರ್ಶನವಾಗಿವೆ ಎಂದರು.
ಜಂಗಮ ಹೊಸಳ್ಳಿಯ ಪುರವರ್ಗ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಶಿವಶರಣ ಅಪ್ಪಣ್ಣ ನವರು ಕಾಯ, ವಾಚ, ಮನಸ್ಸಿನಿಂದ ಭಕ್ತಿಪೂರ್ವಕವಾಗಿ ನ್ಯಾಯ ಹಾಗೂ ಧರ್ಮದ ಗೌರವ ಸಂಪಾದನೆ ಮಾಡಿದರು. ಹನ್ನೆರಡನೇ ಶತಮಾನದ ಪ್ರಸಿದ್ದ ವಚನಕಾರರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣನವರು ತಮ್ಮ ವಚನ ತತ್ವಾದರ್ಶಗಳ ಮೂಲಕ ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿರುತ್ತಾರೆ ಎಂದರು.
ಜಗಜ್ಯೋತಿ ಬಸವಣ್ಣನವರ ಅನುಯಾಯಿ ಹಾಗೂ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಅಪ್ಪಣ್ಣನವರು ಸಮಾಜದಲ್ಲಿ ಸಮಾನತೆ, ಐಕ್ಯತೆ ಹಾಗೂ ಒಗ್ಗಟ್ಟಿನ ಸಾರವನ್ನು ತಮ್ಮ ವಚನಗಾಯನಗಳ ಮುಖಾಂತರ ಸಾರಿ, ಸಮಾಜ ಪರಿವರ್ತನೆಯಾಗುವಲ್ಲಿ ಶ್ರಮವಹಿಸಿದರು ಎಂದು ಹೇಳಿದರು.
ಶಿವಶರಣ ಹಡಪದ ಅಪ್ಪಣ್ಣನವರಂತೆ ಮನುಷ್ಯರು ಮಾನವೀಯ ಗುಣ, ನೀತಿ ಮೌಲ್ಯಗಳನ್ನು ಅಲವಡಿಸಿಕೊಂಡು ಮಾದರಿ ಜೀವನ ನಡೆಸಬೇಕು ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರದೊಂದಿಗೆ ನಗರದ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಭವ್ಯ ಮೆರವಣಿಗೆ ಜರುಗಿತು.