ಜಿಲ್ಲೆ

ವಚನ ಮಾಂಗಲ್ಯ ಸಂಕಲ್ಪದಿಂದ ವಿವಾಹ:  ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ ಧನ್ಯಾ, ಅನ್ಶುಲ್

ಮೈಸೂರು: ನಗರದ ಕೃಷ್ಣಮೂರ್ತಿಪುರಂನ ನಿತ್ಯೋತ್ಸವ ಸಭಾಭವನದಲ್ಲಿ ಇತ್ತೀಚೆಗೆ ಅಪರೂಪದ ವಿವಾಹ ಸಮಾರಂಭ ಜರುಗಿತು.

ಮೈಸೂರಿನ ಲತಾ ಮತ್ತು ಎಚ್.ಇ.ಚಂದ್ರಶೇಖರ್ ಅವರ ಪುತ್ರಿ(ಜೆಎಸ್‌ಎಸ್ ವಿಕಲಚೇತನರ ಪಾಲಿಟೆಕ್ನಿಕ್ ನಿವೃತ್ತ ವಿಭಾಗ ಮುಖ್ಯಸ್ಥರು) ಧನ್ಯಾ ಹಾಗೂ ದೂರದ ಹರಿಯಾಣದ ವತನ್ ಮತ್ತು ಪರದೀಪ್ ಅವರ ಪುತ್ರ ಅನ್ಶುಲ್ ವಚನ ಮಾಂಗಲ್ಯ ಸಂಕಲ್ಪದ ಮೂಲಕ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.

ಮುಡುಕನಪುರ ಹಲವಾರ ಮಠಾಧೀಶ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಹಾಸನ ಜಿಲ್ಲೆಯ ಋಷಿ ಶೃಂಗ ಆಶ್ರಮದ ಧರ್ಮಾಧಿಕಾರಿ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

12ನೇ ಶತಮಾನದ ಸಮಾಜ ಸುಧಾರಣೆ ಚಳವಳಿ ಕಾಲದ ಶರಣ ಸಂಸ್ಕೃತಿಯ ಭಾಗವಾದ ವಚನ ಮಾಂಗಲ್ಯ ಪದ್ಧತಿಯನ್ನು ಸಕಲರೂ ಅಳವಡಿಸಿಕೊಂಡು ಅರ್ಥಪೂರ್ಣ ಜೀವನ ಶೈಲಿ ರೂಪಿಸಿಕೊಳ್ಳುವಂತೆ ಸ್ವಾಮೀಜಿಗಳು ಆಶೀರ್ವಚನದಲ್ಲಿ ಸಲಹೆ ನೀಡಿದರು.

ನೂತನ ವಧುವರರಿಗೆ ಶರಣ ಸಾಹಿತ್ಯ ಪರಿಷತ್‌ನ ಸಂಚಾಲಕಿ ಶಾರದಾ ಶಿವಲಿಂಗಸ್ವಾಮಿ ಅವರು ವಚನ ಮಾಂಗಲ್ಯ ಸಂಕಲ್ಪದ ಪಂಚ ಸೂತ್ರಗಳನ್ನು ಬೋಧಿಸಿದರು.

ನವ ದಂಪತಿಗೆ ಶುಭಕೋರಿ ಮಾತನಾಡಿದ ಪ್ರೊ. ಮೊರಬದ ಮಲ್ಲಿಕಾರ್ಜುನ, ಮದುವೆ ಸಂಪ್ರದಾಯ ದುಂದುವೆಚ್ಚ ಮತ್ತು ಜಟಿಲ ಧಾರ್ಮಿಕ ವಿಧಿಗಳ ಜಂಜಾಟವಾಗಿ ಪರಿಣಮಿಸಿರುವ ಇಂದಿನ ದಿನಗಳಲ್ಲಿ ಸರಳ ವಿವಾಹ ಅನುಕರಣೀಯ ಎಂದು ನುಡಿದರು.

ಪತ್ರಕರ್ತ ಎಸ್.ಆರ್.ಆರಾಧ್ಯ ಮಾತನಾಡಿ, ಕುವೆಂಪು ಅವರ ಮಂತ್ರ ಮಾಂಗಲ್ಯದ ಮಾದರಿಯಲ್ಲಿ ವಚನ ಮಾಂಗಲ್ಯ ಪದ್ಧತಿಯೂ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದರು. ಗಾಯಕ ಆನಂದಕುಮಾರ್ ಮತ್ತು ತಂಡದವರಿಂದ ವಚನ ಗಾಯನ ಏರ್ಪಡಿಸಲಾಗಿತ್ತು.