ಭಾಲ್ಕಿ: ಪಟ್ಟಣದಲ್ಲಿ ಏ.೨೦ ರಿಂದ ೨೨ರ ವರೆಗೆ ಮೂರು ದಿನ ನಡೆಯುವ ವಚನ ಜಾತ್ರೆ- ೨೦೨೫ ಮತ್ತು ಶತಾಯಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೨೬ನೇ ಸ್ಮರಣೋತ್ಸವ ಯಶಸ್ವಿಗೆ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಭಯ ನೀಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ವಚನ ಜಾತ್ರೆ-೨೦೨೫ ಮತ್ತು ಡಾ.ಚನ್ನಬಸವ ಪಟ್ಟದ್ದೇವರ ೨೬ನೇ ಸ್ಮರಣೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶತಾಯಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ವಿಶ್ವಗುರು ಬಸವಣ್ಣನವರ ವಾರಸುದಾರರಾಗಿ ಈ ಭಾಗವನ್ನು ಬೆಳಗಿಸುವ ಪ್ರಯತ್ನ ಮಾಡಿದ್ದಾರೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಪೂಜ್ಯರ ಚಿಂತನೆ, ಆದರ್ಶ ಸದಾಕಾಲ ನಮ್ಮೊಂದಿಗೆ ಇರುತ್ತವೆ ಎಂದು ಹೇಳಿದರು.
ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಕಳೆದ ೨೫ ವರ್ಷಗಳಿಂದ ಪೂಜ್ಯರ ಸ್ಮರಣೋತ್ಸವ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ವಚನ ಜಾತ್ರೆ, ಪೂಜ್ಯರ ಸ್ಮರಣೋತ್ಸವ ಐತಿಹಾಸಿಕವಾಗಿ ಆಚರಿಸಲು ಸಿದ್ಧತೆಗಳು ಆರಂಭಗೊಂಡಿವೆ. ಈ ಮೂರು ದಿನದ ಧಾರ್ಮಿಕ ಸಮಾರಂಭದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರ ವಿಚಾರಧಾರೆಯನ್ನು ಜನಮಾನಸಕ್ಕೆ ತಲುಪಿಸಿದ ಶತಾಯಿಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಮತ್ತು ವಚನ ಜಾತ್ರೆ ಸಮಾರಂಭ ಭಕ್ತರ ಸಹಕಾರ ದಿಂದ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯು ಭಕ್ತರು ತನು, ಮನ, ಧನದಿಂದ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ವಚನ ಜಾತ್ರೆ ಮತ್ತು ಶತಾಯಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ನಿಮಿತ್ತ ಏ.೧೦ ರಿಂದ ೨೨ರ ವರೆಗೆ ಪ್ರವಚನ, ಏ.೧೫ ರಿಂದ ಬೆಳಿಗ್ಗೆ ೬ಕ್ಕೆ ಸಾಮೂಹಿಕ ವಚನ ಪಾರಾಯಣ ಜತೆಗೆ ವಿವಿಧ ಪ್ರದರ್ಶನ, ಶಿಬಿರಗಳು ಜರುಗಲಿವೆ ಎಂದರು.
ನಾರಂಜಾ ಸಕ್ಕರೆ ಕಾರಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿ, ಶತಾಯಿಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಗಡಿಭಾಗದ ನಡೆದಾಡುವ ದೇವರಾಗಿದ್ದರು. ಅಂತಹ ಪೂಜ್ಯರ ಸ್ಮರಣೋತ್ಸವ ಯಶಸ್ವಿಗೆ ತನು, ಮನ, ಧನದಿಂದ ಸಹಕಾರ ನೀಡುತ್ತೇನೆ ಎಂದರು.
ಭಾರತೀಯ ಬಸವಬಳಗದ ಅಧ್ಯಕ್ಷ ಬಾಬು ವಾಲಿ ಬಸವ ಗುರುವಿನ ಪೂಜೆ ನೆರವೇರಿಸಿದರು. ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವಮುರುಘೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ವಂಕೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ, ಪ್ರಮುಖರಾದ ಚಂದ್ರಕಾಂತ ಪಾಟೀಲ, ಸೋಮನಾಥಪ್ಪ ಅಷ್ಟೊರೆ, ಗುಂಡಪ್ಪ ಸಂಗಮಕರ, ಬಸವರಾಜ ವಂಕೆ, ಶಿವಕುಮಾರ ಕಲ್ಯಾಣೆ, ಶಂಭುಲಿಂಗ ಕಾಮಣ್ಣ, ಜೈರಾಜ್ ಪಾರೆ, ಸಂಗಮೇಶ ವಾಲೆ, ವಿಲಾಸ ಬಕ್ಕಾ, ಡಾ.ಅಮೀತ ಅಷ್ಟೊರೆ, ವಿಶ್ವನಾಥಪ್ಪ ಬಿರಾದಾರ, ಸಿದ್ದಯ್ಯ ಕಾವಡಿಮಠ, ಬಾಬುರಾವ ಜಲ್ದೆ, ರೇಖಾಬಾಯಿ ಅಷ್ಟೊರೆ, ಮಲ್ಲಮ್ಮ ನಾಗನಕೇರೆ, ಮಹಾನಂದ ದೇಶಮುಖ ಇತರರಿದ್ದರು.
ಸ್ವಾಗತ ಸಮಿತಿಗೆ ಆಯ್ಕೆ: ವಚನ ಜಾತ್ರೆ-೨೦೨೫ ಮತ್ತು ಶತಾಯಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೨೬ನೇ ಸ್ಮರಣೋತ್ಸವ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಸ್ವಾಗತ ಸಮಿತಿ ಅಧ್ಯಕ್ಷ ಖಂಡ್ರೆ ಅವರನ್ನು ಉಭಯ ಪೂಜ್ಯರು ಸನ್ಮಾನಿಸಿ, ಗೌರವಿಸಿದರು.
ವಚನ ಜಾತ್ರೆ, ಶತಾಯಿಷಿ ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಐತಿಹಾಸಿಕವನ್ನಾಗಿಸಲು ವಚನ ರಥೋತ್ಸವ ಆಚರಣೆಗೆ ತರುವಂತೆ ಮಠಾಧೀಶರು, ಭಕ್ತರು ಸಲಹೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಚರಣೆಗೆ ತರುವ ಪ್ರಯತ್ನ ಮಾಡಲಾಗುವುದು.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರು