ಹೊಸಪೇಟೆ: ಕನ್ನಡ ವಿವಿಯ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ನಗರದ ವಿಜಯನಗರ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಸಮಕಾಲೀನ ಸಂದರ್ಭದ ಜತೆ ಮುಖಾಮುಖಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಿತು.
ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸಿ ಮಾತನಾಡಿ, ವಚನ ಚಳವಳಿ 12ನೇ ಶತಮಾನದಲ್ಲಿ ಕನ್ನಡನಾಡಿನಲ್ಲಿ ನಡೆದ ಬಹುದೊಡ್ಡ ಜನ ಸಂಸ್ಕೃತಿಯನ್ನು ಜನರ ಭಾವನೆಗಳ ಮೂಲಕ ಕನ್ನಡದಲ್ಲಿ ಅನಾವರಣಗೊಳಿಸಿದ ಬಹುದೊಡ್ಡ ಸಾಂಸ್ಕೃತಿಕ ಚಳವಳಿ ಎಂದರು.
ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಕ್ರಿ.ಪೂ. 6ನೇ ಶತಮಾನದ ಬುದ್ಧ ಪ್ರತಿಪಾದನೆ ಮಾಡಿದ ಆಶಯಗಳು, 12ನೇ ಶತಮಾನದಲ್ಲಿ ಬಸವ ಹಾಗೂ ಬಸವಾದಿ ಶರಣ ಶರಣೆಯರು ಪ್ರತಿಪಾದನೆ ಮಾಡಿದ ಆಶಯಗಳೇ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲ ಆಶಯಗಳಾಗಿವೆ. ವಚನ ಚಳವಳಿ, ವಚನ ಸಾಹಿತ್ಯ, ಅನುಭವ ಮಂಟಪದ ಮೂಲಕ ಸಂಘಟನಾ ರೂಪವೇ ಸ್ವತಂತ್ರ ಭಾರತ ಕರ್ನಾಟಕದಲ್ಲಿ ಸಂಭವಿಸಿದ ದಲಿತ ಸಾಹಿತ್ಯ, ದಲಿತ ಚಳವಳಿ, ದಲಿತ ಸಂಘಟನೆಗಳಾಗಿ ರೂಪುಗೊಂಡವು ಎಂದು ಹೇಳಿದರು.
ವಿಜಯನಗರ ಕಾಲೇಜಿನ ಅಧ್ಯಕ್ಷ ಮಲ್ಲಿಕಾರ್ಜುನ ಮೇಟಿ ಅಧ್ಯಕ್ಷತೆ ವಹಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಪ್ರಾಂಶುಪಾಲ ಡಾ.ಎಂ.ಪ್ರಭುಗೌಡ, ಸಂಸ್ಥೆಯ ಅಜೀವ ಸದಸ್ಯರಾದ ಡಾ.ಮಹಾಬಲೇಶ್ವರ ರೆಡ್ಡಿ, ಬಸವರಾಜ್ ಮಾವಿನಹಳ್ಳಿ ಇತರರಿದ್ದರು.