ಬಾಗಲಕೋಟೆ: ಜಿಲ್ಲೆಯ ಗುಡೂರ ಎಸ್ಸಿ ಸಿ ಗ್ರಾಮದಲ್ಲಿ ಶ್ರವಣ ಶ್ರಾವಣದ ಪ್ರಯಕ್ತ ಶರಣ ಚರಿತಾಮೃತದ ಮಹಾಮಂಗಲೋತ್ಸವ ಹಾಗೂ ಬಸವಾದಿ ಶಿವಶರಣರ ವಚನ ಗ್ರಂಥಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಬಹಳ ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಶ್ರೀವೀರಶೈವ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪುರಾಣ ಮಹಾಮಂಗಲೋತ್ಸವ ಹಾಗೂ ಬಸವಾದಿ ಶಿವಶರಣರ ವಚನ ಗ್ರಂಥಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಸರ್ವ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಸಂಪ್ರದಾಯಿಕ ಪೂಜಾ ವಿಧಾನಗಳ ನಂತರ ಅಡ್ಡಪಲ್ಲಕ್ಕಿ ಮೆರವಣಿಗೆಯೂ ಸಾಗಿತು.
ಜಗದ್ಗುರು ಮೈಸೂರು ವಿಜಯಮಹಾಂತೇಶ್ವರ ಕೃಪಾಪೋಷಿತ ರೋಣದ ಸಂಗನಬಸವ ಅನುಭಾವ ಮಂಟಪದಿಂದ ಹೊರಟ ಮೆರವಣಿಗೆ ಅಕ್ಕಮಹಾದೇವಿ ದೇವಾಲಯಕ್ಕೆ ಬಂದು ನಂತರ ಮೈಸೂರು ವಿಜಯಮಹಾಂತ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಪ್ರಾರಂಭವಾದ ಮರವಣಿಗೆ ಬಸ್ ನಿಲ್ದಾಣ, ಹುಲ್ಲೇಶ್ವರ ದೇವಾಲಯ, ಹುಂಚಿ ಕಟ್ಟಿ, ವಿಜಯ ಮಹಾಂತೇಶ ಬ್ಯಾಂಕ್, ಕಾಯಿಪಲ್ಯ ಮಾರುಕಟ್ಟೆ, ಪ್ಯಾಟಿ ಬಸವೇಶ್ವರ ದೇವಾಲಯದ ಮಾರ್ಗವಾಗಿ ಸಂಗನಬಸವ ಅನುಭಾವ ಮಂಟಪ ತಲುಪಿತು.
ವ್ಯಾಪಾರಸ್ಥರು ತಮ್ಮ ಮಳಿಗೆಗಳಿಗೆ ರಜೆ ಘೋಷಿಸಿ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂದ್ದರು. ಮಹಿಳೆಯರ ಡೊಳ್ಳು ಕುಣಿತ, ಭಾಜಾ ಭಜಂತ್ರಿ., ರಾಜೂರಿನ ಕಾಲಕಾಲೇಶ್ವರ ಭಜನಾ ಮಂಡಳಿಯ ಭಜನಾ ನೃತ್ಯವು ಗಮನ ಸೆಳೆಯಿತು. ಯುವಕರು ಧ್ವನಿ ವರ್ಧಕಕ್ಕೆ ಹೆಜ್ಜೆ ಹಾಕುತ ಸಂಭ್ರಮಿಸಿದರು. ಕುಂಭಹೊತ್ತು ಮಹಿಳೆಯರು ಮೆರವಣಿಗೆ ಗೆ ಮತ್ತಷ್ಟು ಮೆರಗು ತಂದರು. ಮೆರವಣಿಗೆ ನಂತರ ಅನ್ನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ಸಂಜೆ ಸಮಯದಲ್ಲಿ ಧರ್ಮಸಭೆ, ಪುರಾಣ ಮಹಾಮಂಗಲೋತ್ಸವ ದಾಸೋಹಿಗಳಿಗೆ ಸನ್ಮಾನ., ಶರಣರ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿದವು.
ಗುರುಮಹಾಂತ ಸ್ವಾಮಿಗಳು, ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಗ್ರಾಪಂ ಅಧ್ಯಕ್ಷ ಶಶಿಧರ ಮ್ಯಾಗೇರಿ, ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ರೋಣದ, ಅಶೋಕ ಗಂಜಿಹಾಳ, ಕಾಂತಪ್ಪ ರಾಜೂರ, ಚೋಳಯ್ಯ ಸಾಲಿಮಠ, ಮಹೇಶ ಜಡ್ರಾಂಕುಂಟಿ, ವೀರಭದ್ರಪ್ಪ ಗಂಜಿಹಾಳ, ದೊಡ್ಡಬಸಯ್ಯ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ವಿಜಯ ರೋಣದ ಇದ್ದರು.