ಕಲಬುರಗಿ: ವಚನ ಆಷಾಡ ನಿಮಿತ್ತ ನಗರದ ಜಯನಗರದಲ್ಲಿನ ಅನುಭವ ಮಂಟಪದಲ್ಲಿ ಜು.೭ರಿಂದ ಆ.೪ರವರೆಗೆ ವಿಶ್ವಕ್ಕೆ ಶರಣರ ಸಂದೇಶ: ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಬಸವ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ ತಿಳಿಸಿದರು.
ನಿತ್ಯ ಸಂಜೆ ಆರು ಗಂಟೆಗೆ ಶರಣದ ತತ್ವದ ಪ್ರವಚನ ನಡೆಯಲಿದೆ. ಮುದಗಲ್-ತಿಮ್ಮಾಪುರ ಮಹಾಂತೇಶ್ವರ ಮಠ, ಕಲ್ಯಾಣ ಆಶ್ರಮದ ಶ್ರೀ ಮಹಾಂತ ಸ್ವಾಮೀಜಿ ಅನುಭಾವ ನೀಡಲಿದ್ದಾರೆ. ಕೇಂದ್ರ ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಉದ್ಘಾಟಿಸಲಿದ್ದಾರೆ. ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಬಿ.ಡಿ.ಜತ್ತಿ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ದಂಡೆ, ಬಸವ ಸಮಿತಿ ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ, ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ವಾಲಿ ಉಪಸ್ಥಿತರಿರಲಿದ್ದಾರೆ ಎಂದರು.
ಬಸವ ಸಮಿತಿ ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ ಮಾತನಾಡಿ, ಬಸವ ಸಮಿತಿಯಿಂದ ಶರಣರ ತತ್ವ ಸಾರುವ ಕೆಲಸ ಮಾಡುತ್ತಿದ್ದು, ವಚನ ಶ್ರಾವಣ ಪ್ರಮುಖವಾಗಿದೆ. ೨೦೧೬ರಲ್ಲಿ ಬೇಲಿ ಮಠದ ಸ್ವಾಮೀಜಿ, ೨೦೧೭ರಲ್ಲಿ ಮಹಾಂತ ದೇವರು, ೨೦೧೮ರಲ್ಲಿ ಅಕ್ಕ ಅನ್ನಪೂರ್ಣ, ೨೦೧೯ರಲ್ಲಿ ಈಶ್ವರ ಮಟ್ಟೂರ ಅವರು ಉಪನ್ಯಾಸ ನೀಡಿದ್ದಾರೆ. ೨೦೨೦-೨೧ರಲ್ಲಿ ಆನ್‌ಲೈನï ಮೂಲಕ ತಿಂಗಳು ಉಪನ್ಯಾಸ, ೨೦೨೨ರಲ್ಲಿ ಅಶೋಕ ಪದಮಡಗಿ, ೨೦೨೩ರಲ್ಲಿ ಬಸವರಾಜಪ್ಪ ಉಪನ್ಯಾಸ ನೀಡಿದ್ದಾರೆ. ೨೦೧೮ರಲ್ಲಿ ವಚನ ಶ್ರಾವಣದ ಬದಲು ಮೌಢ್ಯ ಆಚರಣೆ ವಿರೋಧಿಸಿ ವಚನ ಆಷಾಢ ಆಚರಿಸಲಾಗಿದೆ ಎಂದರು.
ಬಸವ ಸಮಿತಿ ಸಂಚಾಲಕ ಎಸ್.ಕೆ.ಉದ್ದಂಡಯ್ಯ, ಆನಂದ ಇದ್ದರು.