ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ಸಂಸಾರದಲ್ಲಿನ ಗಲಾಟೆ, ಜಗಳದಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯನ್ನು ಪತಿ ಮತ್ತು ಸವತಿಯ ಪುತ್ರ ಸೇರಿಕೊಂಡು ಮಂಗಳವಾರ ಬೆಳಗ್ಗೆ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ತಾಲೂಕಿನ ಸೊಣ್ಣೇನಹಳ್ಳಿಯ ಪದ್ಮಮ್ಮ (45) ಕೊಲೆಯಾದವರು. ಪತಿ ಮುನಿರೆಡ್ಡಿ (58) ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದರೆ, ಕೃತ್ಯದಲ್ಲಿ ಭಾಗಿಯಾದ ಮೃತಳ ಸವತಿಯ ಪುತ್ರ ಗಿರೀಶ್ (20) ತಲೆಮರೆಸಿಕೊಂಡಿದ್ದಾನೆ.
ಮುನಿರೆಡ್ಡಿ ಮತ್ತು ಪದ್ಮಮ್ಮ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪದ್ಮಮ್ಮಗೆ ಇಬ್ಬರು ಪುತ್ರರಿದ್ದರು. ಆದರೆ ಇವರಿಬ್ಬರೂ ಪ್ರತ್ಯೇಕ ಅಪಘಾತಗಳಲ್ಲಿ ಈ ಹಿಂದೆಯೇ ಮೃತಪಟ್ಟಿದ್ದರಿಂದ ಪದ್ಮಮ್ಮ ಒಂಟಿಯಾಗಿ ಗ್ರಾಮದಲ್ಲಿ ವಾಸಿಸುತ್ತಿದ್ದರು.
ಪದ್ಮಮ್ಮಳಿಂದ ವಿಚ್ಛೇದನ ಪಡೆದಿದ್ದ ಮುನಿರೆಡ್ಡಿ ಎರಡನೇ ಮದುವೆಯಾಗಿದ್ದು, ಪುತ್ರ, ಪುತ್ರಿ ಇದ್ದಾರೆ. ಈ ಮಧ್ಯೆ ಪದ್ಮಮ್ಮಳಿಗೆ ಜೀವನಾಂಶಕ್ಕಾಗಿ ನೀಡಿದ ಜಮೀನನ್ನು ವಾಪಸ್ ಮಾಡುವಂತೆ ಮುನಿರೆಡ್ಡಿ ತಗಾದೆ ತೆಗೆದಿದ್ದ ಎನ್ನಲಾಗಿದೆ. ನಿನಗೆ ಮಕ್ಕಳಿಲ್ಲ, ಜಮೀನು ಇಟ್ಟುಕೊಂಡು ಏನು ಮಾಡ್ತೀಯಾ. ಜಮೀನು ವಾಪಸ್ ಮಾಡು ಎಂದು ಆಗಾಗ ಪೀಡಿಸುತ್ತಿದ್ದ. ಇದು ಪದ್ಮಮ್ಮ ಮತ್ತು ಮುನಿರೆಡ್ಡಿ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಮುನಿರೆಡ್ಡಿ ಹಾಗೂ ಆತನ ಮಗ ಗಿರೀಶ್ ಮಂಗಳವಾರ ಬೆಳಗ್ಗೆಯೇ ಪದ್ಮಮ್ಮಳ ಮನೆಗೆ ತೆರಳಿದ್ದು, ಶೌಚ ಮುಗಿಸಿ ಮನೆಯೊಳಗೆ ಬಂದ ಪದ್ಮಮ್ಮಳ ಮೇಲೆ ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಪದ್ಮಮ್ಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ನಂತರ ಗಿರೀಶ್ ತಲೆಮರೆಸಿಕೊಂಡಿದ್ದು, ಮುನಿರೆಡ್ಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ತೆರಳಿ ಶರಣಾಗಿದ್ದಾನೆ. ಅಲ್ಲಿಂದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ಆರೋಪಿ ಮುನಿರೆಡ್ಡಿಯನ್ನು ಕರೆತರಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಎಂ.ಶ್ರೀನಿವಾಸ್, ಗ್ರಾಮಾಂತರ ಠಾಣೆ ಎಸ್‌ಐ ಸತೀಶ್ ಹಾಗೂ ಸಿಬ್ಬಂದಿ ಸೇರಿ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಸ್ಪಿ ಡಿ.ಎಲ್.ನಾಗೇಶ್, ಎಎಸ್ಪಿ ರಾಜ ಇಮಾಮ್ ಖಾಸಿಂ, ಡಿವೈಎಸ್ಪಿ ಮುರಳೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.