ಜಿಲ್ಲೆ

ವಕ್ಫ್ ಮಂಡಳಿಯ ಗೊಂದಲ ಸರಿಪಡಿಸುವಂತೆ ಮನವಿ

ಚಾಮರಾಜನಗರ: ವಕ್ಫ್ ಮಂಡಳಿಯ ಗೊಂದಲದಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ತಹಸೀಲ್ದಾರ್ ಕಚೇರಿ ಮುಂಭಾಗ ಜಮಾಯಿಸಿದ ರೈತರು, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ವಕ್ಫ್ ಮಂಡಳಿ ಎಂಬ ಗುಮ್ಮಾ ಸ್ವತಂತ್ರ ಪೂರ್ವದಲ್ಲಿ ಸೃಷ್ಟಿಯಾಗಿದ್ದು, ಸ್ವಾತಂತ್ರ್ಯನಂತರ ಹಲವು ಸಂದರ್ಭಗಳಲ್ಲಿ ಇದಕ್ಕೆ ತಿದ್ದುಪಡಿಗಳನ್ನು ತರಲಾಗಿದೆ. ಪ್ರಸ್ತುತ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿರುವ ಹಾಗೂ ಸರ್ಕಾರ ನೀಡಿರುವ ಭೂಮಿಯ ರೈತರಿಗೆ ನೋಟಿಸ್‌ಗಳನ್ನು ನೀಡಲಾಗಿದ್ದು, ವಕ್ಫ್ ಕಾಯ್ದೆ ರೈತರಿಗೆ ಮರಣ ಶಾಸನವಾಗಿದೆ ಎಂದು ದೂರಿದರು.

ವಕ್ಫ್ ಮಂಡಳಿಯಿಂದ ರೈತರು ಭೂಮಿಯನ್ನು ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದ್ದು, ತಲತಲಾಂತರದಿಂದ ಕೃಷಿ ನಂಬಿ ಜೀವನ ನಡೆಸುತ್ತಿರುವ ರೈತ ಕುಟುಂಬಗಳಿಗೆ ಯಾವುದೇ ತೊಂದರೆ ಆಗದಂತೆ ರೈತ ಕುಟುಂಬಗಳಿಗೆ ಭದ್ರತೆ ನೀಡಬೇಕು. ಈಗಾಗಲೇ ಪಹಣಿಯಲ್ಲಿ 11ನೇ ಕಾಲಂನಲ್ಲಿ ನೋಂದಾಯಿಸಿರುವ ವಕ್ಫ್ ಹೆಸರನ್ನು ತೆಗೆಯಬೇಕು. ಯಾವುದೇ ರೈತರಿಗೆ ನೋಟಿಸ್ ನೀಡದಂತೆ ಸರ್ಕಾರವು ವಕ್ಫ್ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯ ಮೈಸೂರು ವಿಭಾಗಿಯ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ರಾಜ್ಯ ವಿಶೇಷ ಆಹ್ವಾನಿತ ಸದಸ್ಯರಾದ ಹೆಬುಸೂರು ಬಸವಣ್ಣ, ಹೆಗ್ಗವಾಡಿಪುರ ಮಹೇಶ್‌ಕುಮಾರ್, ತಾಲೂಕು ಅಧ್ಯಕ್ಷ ಮಹೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇಮಳ್ಳಿ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮೂಡ್ನಕೂಡು ಮಹೇಶ್, ಕೇರಹಳ್ಳಿ ಮಹೇಶ್ ಇತರರು ಇದ್ದರು.