ಶ್ರೀರಂಗಪಟ್ಟಣ : ಜ.20ರಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಣೆ ಬಂದ್ ಮಾಡುವ ಮೂಲಕ ವಕ್ಫ್ ಬೋರ್ಡ್ ಹೆಸರಿನಲ್ಲಿ ನಡೆಯುತ್ತಿರುವ ಲ್ಯಾಂಡ್ ಜಿಹಾದ್ ವಿರುದ್ಧ ಕ್ಷೇತ್ರದ ಜನರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಪಟ್ಟಣದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಉದ್ಯಾನದಲ್ಲಿ ಶನಿವಾರ ವಕೀಲರು ಮತ್ತು ಪುರಸಭಾ ಸದಸ್ಯರು ಸಮ್ಮುಖದಲ್ಲಿ ರೈತರು, ಹಿಂದು ಸಂಘಟನೆಗಳು, ದಸಂಸ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಸಭೆ ನಡೆಸಿ ವಕ್ಫ್ ವಿರುದ್ಧ ಧನಿ ಎತ್ತಲು ರೈತ ಹಿತರಕ್ಷಣಾ ಸಮಿತಿ ಹೋರಾಟದ ರೂಪುರೇಷೆ ಸಿದ್ಧಪಡಿಸಿ ಮಾತನಾಡಿದರು.
ಪುರಸಭಾ ಸದಸ್ಯ ಎಸ್.ಪ್ರಕಾಶ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ರೈತರ ಬೆಲೆಬಾಳುವ ಕೃಷಿ ಜಮೀನುಗಳ ಆರ್‌ಟಿಸಿಯಲ್ಲಿ ವಕ್ಫ್ ಹೆಸರು ಕೂರಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಸಹಕಾರ ನೀಡುತ್ತಿದ್ದು, ಬಡವರ ಬದುಕಿಗೆ ಮರಣ ಶಾಸನ ಬರೆಯಲು ಮುಂದಾಗಿದೆ. ಹಿಂದೆ 2014ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿರುವ ಹುನ್ನಾರ ಈಗ ಬೆಳಕಿಗೆ ಬರುತ್ತಿದ್ದು, ಈ ಅಕ್ರಮ ಭೂಕಬಳಿಕೆ ಮಾಡುತ್ತಿರುವ ವಕ್ಫ್ ಮಂಡಳಿಯನ್ನು ವಜಾಗೊಳಿಸಬೇಕು ಎಂದರು.
ವಕೀಲರಾದ ಎಸ್.ಆರ್.ಸಿದ್ದೇಶ್, ಜಯಸ್ವಾಮಿ ಹಾಗೂ ಎ.ಟಿ.ಜಯಕುಮಾರ್ ಮಾತನಾಡಿ, ವಕ್ಫ್ ಮಂಡಳಿ ಕಲಂ. 85 ಭಾರತದ ಸಂವಿಧಾನಕ್ಕೆ ವಿರುದ್ಧ ಹಾಗೂ ಅವೈಜ್ಞಾನಿಕವಾಗಿದ್ದು, ಈ ನಿಯಮದಡಿ ವಕ್ಫ್ ಕಾನೂನಿನ ಯಾವ ನಿಯಮ ನಿಯಂತ್ರಣಗಳಿಗೂ ಒಳಪಡದೆ ಕೇವಲ ಮುಸ್ಲಿಂ ಟ್ರಿಬ್ಯೂನಲ್ ಮೂಲಕ ತನ್ನ ಸರ್ವೋಚ್ಛ ನಡೆಯನ್ನು ಅನುಸರಿಸುತ್ತಿದೆ. ವಕ್ಫ್ ಮಂಡಳಿ ಮೂಲಕ ಅಲ್ಪ ಅಂಖ್ಯಾತ ಹಿಂದುಳಿದ ಜನರ ಅಭಿವೃದ್ಧಿ ಉದ್ದೇಶಕ್ಕೆ ರಚಿಸಿದ ಈ ನಿಯಮ ಇದೀಗ ದ್ವೇಷ ಮತ್ತು ಅಕ್ರಮ ಆಸ್ತಿ ಕಬಳಿಗೆ ಬಳಸಲಾಗುತ್ತಿದ್ದು, ಮೂಲದಾಖಲೆಗಳ ಆಧಾರವಿಲ್ಲದೆ ಕಾನೂನು ನಿಯಮಗಳ ಉಲ್ಲಂಘಿಸಿ ಅಕ್ರಮವಾಗಿ ಭೂಮಿ ನುಂಗುತ್ತಿದೆ. ಸ್ವತ್ತು ಕಳೆದುಕೊಂಡು ಅನ್ಯಾಯಕ್ಕೆ ಒಳಗಾದವರು ರೈತರು ಮತ್ತು ಬಡವರು ಈ ಬಗ್ಗೆ ಧನಿ ಎತ್ತಿ ಸ್ವತ್ತು ತಮ್ಮದೆಂದು ರುಜುವಾತುಪಡಿಸಿ ಪ್ರಶ್ನಿಸದ ಪರಿಸ್ಥಿತಿ ನಿರ್ಮಾಣವಾಗಿದೆ. 3 ತಿಂಗಳ ಹಿಂದೆ ಧಾರವಾಡದಲ್ಲಿ ನಟರಾಜನ್ ಎಂಬ ನ್ಯಾಯಾಧೀಶರು ಮದರ್ ಡೀಡ್ ಹಾಗೂ ಮೂಲ ದಾಖಲಾತಿಗಳಲ್ಲದೆ ಅಕ್ರಮವಾಗಿ ನೇರ ವಕ್ಫ್ ಹೆಸರಿಗೆ ಖಾತೆಯಾಗಿದ್ದ ಸ್ವತ್ತನ್ನು ನೇರವಾಗಿ ಹಿಂತಿರುಗಿಸುವಂತೆ ನೀಡಿದ್ದ ಆದೇಶದ ರೀತಿಯಲ್ಲಿ ಅಧಿಕಾರಿಗಳು ಹಾಗೂ ಸರ್ಕಾರ ಎಚ್ಚರಗೊಳ್ಳಬೇಕಿದೆ ಎಂದರು.
ಶ್ರೀರಂಗಪಟ್ಟಣ ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಚಂದನ್ ಹಾಗೂ ಹಿರಿಯ ಮುಖಂಡ ಪೈ.ಮುಕುಂದ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನ ಕಿರಂಗೂರು, ಬೊಮ್ಮೂರು ಅಗ್ರಹಾರ ಹಾಗೂ ವಿವಿಧ ಸರ್ಕಾರಿ ಶಾಲೆ, ದೇಗುಲ ಮತ್ತು ಪ್ರಮುಖ ಆಸ್ತೀಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರ ವಕ್ಫ್ ಮಂಡಳಿ ನಡೆಸಿರುವ ಅಕ್ರಮ ಭೂ ಕಬಳಿಕೆಯ ಲ್ಯಾಂಡ್ ಜಿಹಾದ್ ಕಂಡುಬಂದಿದ್ದು, ಈ ಅಕ್ರಮದ ಬಗ್ಗೆ ಕ್ಷೇತ್ರದ ಶಾಸಕರು ಪ್ರಶ್ನಿಸಬೇಕಿದೆ. ರಾಜ್ಯಸರ್ಕಾರ ನಮಗೆ ನ್ಯಾಯ ನೀಡದಿದ್ದಲ್ಲಿ ಇದರ ವಿರುದ್ಧ ರೈತರು, ಕನ್ನಡ ಪರ ಹೋರಾಟಗಾರರು, ಒಕ್ಕಲಿಗ, ಸವಿತ ಸಮಾಜ, ದಸಂಸ, ಮಡಿವಾಳ ಎಂಬ ಜಾತಿ ಭೇದವಿಲ್ಲದೆ ರೈತ ಹಿತರಕ್ಷಣಾ ಸಮಿತಿ ನಿರ್ಮಿಸಿದ್ದು ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ನ್ಯಾಯವಾದಿಗಳ ಬೆಂಬಲ ಮತ್ತು ಸಹಕಾರದಲ್ಲಿ ಹೋರಾಟಕ್ಕೆ ರೂಪುರೇಷೆ ಸಿದ್ದಪಡಿಸಲಾಗಿದೆ. ಜ.20 ರಂದು ಈ ಬಗ್ಗೆ ರಾಜ್ಯಾದ್ಯಂತ ಗಮನಸೆಳೆದು ಈ ಅಕ್ರಮ ಕಿತ್ತೊಗೆಯಲು ಸ್ವಯಂ ಪ್ರೇರಣೆಯಿಂದ ಶ್ರೀರಂಗಪಟ್ಟಣ ಬಂದ್ ನಡೆಸಲು ಕರೆ ನೀಡಲಾಗಿದೆ. ರಾಜ್ಯಸರ್ಕಾರ ಒಂದು ವೇಳೆ ಈ ಅಕ್ರಮ ಸರಿಪಡಿಸಿ ವಕ್ಫ್ ಖಾತೆ ಕಿತ್ತೊಗೆಯದಿದ್ದರೆ ತಾಲೂಕು ಕಚೇರಿಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಕೂರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭ ಸದಸ್ಯ ಎಸ್.ಟಿ.ರಾಜು, ಮಾಜಿ ಸದಸ್ಯ ಕಾಯಿ ವೆಂಕಟೇಶ್, ಕಸಾಪ ನಗರ ಘಟಕದ ಅಧ್ಯಕ್ಷೆ ಲಯನ್ ಸರಸ್ವತಿ, ವಕೀಲರುಗಳಾದ ಬಾಲರಾಜ್, ಶೋಭಾ,ಜೆಡಿಎಸ್ ಕಾರ್ಯಧ್ಯಕ್ಷ ನಗುವನಹಳ್ಳಿ ಶಿವಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಬೊಮ್ಮೂರು ಅಗ್ರಹಾರ ವೆಂಕಟೇಶ್, ಕರವೇ ಮುಖಂಡ ಚಂದಗಾಲು ಶಂಕರ್, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಜಗದೀಶ್, ಕೆಂಪೇಗೌಡ ಯುವ ಶಕ್ತಿ ವೇದಿಕೆ ಅಧ್ಯಕ್ಷ ಮಹೇಶ್, ಮುಖಂಡರಾದ ಗಂಜಾಂ ಚಂದ್ರಶೇಖರ್, ದಸಂಸ ಮುಖಂಡ ಕುಬೇರ, ಬಿಜೆಪಿ ಮುಖಂಡರಾದ ಸುನೀಲ್ ಕುಮಾರ್, ಹೇಮಂತ್, ಸೋಮಶೇಖರ್, ಮದನ್ ರಾವ್, ಪಿ.ರಾಘು ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.