ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಮುಖಂಡರಾದ ಬಸವರಾಜ ಯಂಕಂಚಿ, ರಾಜು ನಾಯ್ಕರ, ಲಕ್ಷ್ಮೀ ನಾರಾಯಣ ಕಾಸಟ್, ಜಿ.ಎನ್.ಪಾಟೀಲ, ಗುಂಡುರಾವ ಸಿಂಧೆ, ಯಲ್ಲಪ್ಪ ಬೆಂಡಿಗೇರಿ, ಸತ್ಯನಾರಾಯಣ ಹೇಮಾದ್ರಿ ಇದ್ದರು.  
ಜಿಲ್ಲೆ

ವಕ್ಫ್ ಬೋರ್ಡ್ ರದ್ದು ಪಡಿಸಿ

ಬಾಗಲಕೋಟೆ: ವಕ್ಫ್ ಬೋರ್ಡ್ ರದ್ದು ಮಾಡಬೇಕು. ಸಾರ್ವಜನಿಕ ಆಸ್ತಿ ಕಬಳಿಸಲು ಹುನ್ನಾರ ನಡೆಸುತ್ತಿರುವ ವಕಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ಜಮೀರ್ ಅಹ್ಮದ್‌ನನ್ನು ಸಚಿವ ಸ್ಥಾನದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿಳ್ಯಾಕನರ ಅವರ ಮೂಲಕ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರ ಹಿತದೃಷ್ಟಿಯಿಂದ ಹಾಗೂ ವಕ್ ಮಂಡಳಿಯಲ್ಲಿ ಆಗುತ್ತಿರುವ ಅಕ್ರಮ ಗಮನದಲ್ಲಿಟ್ಟುಕೊಂಡು ವಕ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಿದೆ. ಜಂಟಿ ಪಾರ್ಲಿಮೆಂಟರಿ ಬೋರ್ಡ್ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಕಾಯ್ದೆ ಬಹುತೇಕ ಜಾರಿಯಾಗಲಿದೆ ಎಂದರು.

ವಕ್ ಬೋರ್ಡ್ ದಿಂದ ಆಗುತ್ತಿರುವ ಗೊಂದಲ ರಾಜ್ಯದಲ್ಲಿನ ಸಾಮರಸ್ಯ ಹದಗೆಡುವುದಕ್ಕೆ ಕಾರಣವಾಗಿದೆ. ಸರ್ಕಾರದ ವಿವೇಚನೆಯಿಲ್ಲದೇ ಕೈಗೊಳ್ಳುವ ನಿರ್ಧಾರಗಳಿಂದಾಗಿ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬರುತ್ತಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ತನ್ನ ನಿಲುವನ್ನು ತೆಗೆದುಕೊಳ್ಳಬೇಕಾಗಿದ್ದ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಸಂಪೂರ್ಣವಾಗಿ ಅವರ ಪರವಾಗಿ ನಿಂತಿದೆ ಎಂದು ದೂರಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ದೇಶದಲ್ಲಿ ರಕ್ಷಣಾ ಇಲಾಖೆ, ರೈಲ್ವೆ ಇಲಾಖೆಗೆ ಇರುವಷ್ಟು ಆಸ್ತಿ ವಕ್ ಬೋರ್ಡ್ದಲ್ಲಿದೆ. ಈ ಆಸ್ತಿ ಎಲ್ಲಿಂದ ಬಂತು. ಅಂದಾಜು ೯ ಲಕ್ಷ ಎಕರೆ ಜಮೀನು ಎಲ್ಲಿಂದ ಬಂದಿದೆ. ಸರ್ಕಾರ ಕೂಡಲೇ ವಕ್ ಬೋರ್ಡ್ ನ್ನು ರದ್ದು ಮಾಡಲಿ ಎಂದು ಆಗ್ರಹಿಸಿದರು.

ರಾಜ್ಯದ ರೈತರ ಹಿತಕ್ಕೆ ಧಕ್ಕೆಯಾಗುವಂತಹ ಯಾವುದೇ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೈಗೊಳ್ಳುವ ಮತ್ತು ಮತ ಬ್ಯಾಂಕ್ ಉಳಿಸಿಕೊಳ್ಳಲು ಮುಸ್ಲಿಂ ಓಲೈಕೆ ಹಾಗೂ ಹಿಂದೂ ವಿರೋಧಿ ನಿರ್ಧಾರಗಳರ‍್ನು ಕೈಗೊಳ್ಳುವ ತನ್ನ ಹಳೆ ಚಾಳಿಯನ್ನು ಕೈಡಬೇಕು. ವಕ್ ಬೋರ್ಡ್ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಸಚಿವ ಜಮೀರ್ ಅಹ್ಮದ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ರಾಜ್ಯದಲ್ಲಿ ೧ ಲಕ್ಷ ಎಕರೆ ಜಮೀನು ವಕ್ ಸಂಬಂಧಿಸಿದ್ದು ಎಂದು ಸರ್ಕಾರ ಘೋಷಣೆ ಮಾಡಿದೆ. ಗೆಜೆಟ್ ನೋಟಿಪಿಕೇಶನ್ ಕೂಡ ಹೊರಡಿಸಲಾಗಿದೆ. ಈ ಆಸ್ತಿ ಎಲ್ಲಿಂದ ಬಂತು. ಅಲ್ಲಾ,ಮುಲ್ಲಾ, ಮೌಲ್ವಿಗಳು ಕೊಟ್ಟಿದ್ದಾರಾ ಅಥವಾ ಯಾರು ಕೊಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಡಿಸಿ,ತಹಸೀಲ್ದಾರ,ಎಸಿ ಮೂಲಕ ವಕ್‌ಗೆ ಸಂಬಂಧಿಸಿದ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಿ ಎಂದು ಹೇಳುವ ಮೂಲಕ ರೈತರ ಪಹಣಿಯಲ್ಲಿ ವಕ್ ಎಂದು ನಮೂದಿಸುವ ಮೂಲಕ ಪಾಪದ ಕೃತ್ಯವನ್ನು ಮಾಡಿದ್ದಾರೆ. ಇವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಕೂಡಲೇ ಇದಕ್ಕೆ ಕಾಯ್ದೆ ತರಲಿದೆ ಎಂದು ಹೇಳಿದರು.

ಮುಖಂಡರಾದ ಬಸವರಾಜ ಯಂಕಂಚಿ, ರಾಜು ನಾಯ್ಕರ, ಲಕ್ಷ್ಮೀ ನಾರಾಯಣ ಕಾಸಟ್, ಜಿ.ಎನ್.ಪಾಟೀಲ, ಗುಂಡೂರಾವ್ ಸಿಂಧೆ, ಯಲ್ಲಪ್ಪ ಬೆಂಡಿಗೇರಿ, ಸತ್ಯನಾರಾಯಣ ಹೇಮಾದ್ರಿ, ಸವಿತಾ ಲೆಂಕೆಣ್ಣವರ, ಶೋಭಾ ರಾವ್, ಶಶಿಕಲಾ ಮಜ್ಜಗಿ, ವೀರಣ್ಣ ಹಳೇಗೌಡರ, ಪ್ರಭು ಹಡಗಲಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ರಾಮಣ್ಣ ಹೆರಕನ್ನವರ, ಶ್ರೀಧರ ನಾಗರಬೆಟ್ಟ, ಶಂಭುಗೌಡ ಪಾಟೀಲ, ಡಾ.ಶೇಖರ ಮಾನೆ, ಚಂದ್ರಕಾಂತ ಕೇಸನೂರ, ಸುರೇಶ ಮಜ್ಜಗಿ, ಶ್ರೀನಾಥ ಸಜ್ಜನ್, ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ ಇದ್ದರು.