ಚಾಮರಾಜನಗರ: ರಾಜ್ಯದ ಬೇರೆ ಜಿಲ್ಲೆಗಳಂತೆ ಚಾಮರಾಜನಗರ ಜಿಲ್ಲೆಯಲ್ಲೂ ಸಹ ವಕ್ಫ್ ಬೋರ್ಡ್‌ನಿಂದ ರೈತರ ಭೂಮಿ ಕಬಳಿಕೆಗೆ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿಂದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಭವನದ ದ್ವಾರದ ಮುಂಭಾಗ ಗುಂಪುಗೂಡಿದರು. ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶಾಂತಿ ಸಾಮರಸ್ಯದ ನಾಡಾಗಿರುವ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ವಕ್ಫ್ ಮಂಡಳಿಯ ಮೂಲಕ ಆತಂಕದ ಸ್ಥಿತಿಗೆ ತುಳ್ಳುತ್ತಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರಮೋದಿ ವಕ್ಫ್ ಮಂಡಳಿಯ ಅಕ್ರಮಗಳನ್ನು ಗಮನಿಸಿ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಿದೆ. ಆದರೆ ಕಾಂಗ್ರೆಸ್ ರಾಜ್ಯದಲ್ಲಿ ವಕ್ಫ್ ಮೂಲಕ ಸಾರ್ವಜನಿಕರ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಸಿದೆ ಎಂದು ದೂರಿದರು.
ರಾಜ್ಯದ ವಿಜಯಪುರ ಜಲ್ಲೆಯ ಹೊನ್ನಾವಡದ ರೈತರ 1500 ಎಕರೆ ಜಮೀನನ್ನು ವಕ್ಫ್ ಆಸ್ತಿಯೆಂದು ೋಷಿಸಿ ತಹಸೀಲ್ದಾರ್‌ರಿಂದ ಪುಷ್ಟೀಕರಿಸಿ ನೋಟಿಸ್ ನೀಡಲಾಗಿದೆ. ಅಲ್ಲದೆ ಹಾವೇರಿ ಜಿಲ್ಲೆಯಲ್ಲಿ 1649 ಆಸ್ತಿಗಳ ಹಕ್ಕಿಗಾಗಿ ವಕ್ಫ್ ಪ್ರತಿಪಾದಿಸುತ್ತಿದೆ. ಸವಣೂರು ತಾಲೂಕಿನ ಕಡಕೋಳ ಗ್ರಾಪಂ ವ್ಯಾಪ್ತಿಯ ಹನುಮಂತ ದೇವಸ್ಥಾನದ ಅತಿಕ್ರಮಣಕ್ಕೆ ವಕ್ಫ್ ಬೋರ್ಡ್ ಮುಂದಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನಕ್ಕೆ ಸೇರಿದ 6 ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ರೈತರ ಹಿತದೃಷ್ಟಿಯಿಂದ ತನ್ನ ನಿಲುವನ್ನು ತೆಗೆದುಕೊಳ್ಳಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಸಂಪೂರ್ಣ ಅವರ ಪರವಾಗಿ ನಿಂತಿದೆ. ಇದಕ್ಕೆ ಕಾರಣವಾಗಿರುವ ಸಚಿವ ಜಮೀರ್ ಅಹಮದ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಹೊರಗೆ ಹಾಕಬೇಕು. ಸಿಎಂ ಸಿದ್ದರಾಮಯ್ಯ ಜನರ ಕ್ಷಮೆ ಕೇಳಬೇಕು. ವಕ್ಫ್ ಬೋರ್ಡ್ ವಿವಾದದ ಕುರಿತು ಸಿಎಂ ಸ್ಪಷ್ಟನೆ ನೀಡಬೇಕು. ಮುಂದಿನ ದಿನಗಳಲ್ಲಿ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು. ಪ್ರತಿಭಟನೆಯಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಡಾ.ಬಾಬು, ನೂರೊಂದುಶೆಟ್ಟಿ, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ, ವೃಷಭೇಂದ್ರಪ್ಪ, ಸಿ.ಬಿ.ಸೂರ್ಯಕುಮಾರ್, ನಟರಾಜು, ಬಾಲಸುಬ್ರಹ್ಮಣ್ಯಂ, ಆನಂದ್ ಭಗೀರಥ, ಶಿವು ವಿರಾಟ್, ಶಿವರಾಜು, ಮಂಜು, ವೀರೇಂದ್ರ, ವೀರಭದ್ರಸ್ವಾಮಿ, ವೆಂಕಟೇಶ್ ಮತ್ತು ಇತರರು ಭಾಗವಹಿಸಿದ್ದರು.