ಮೈಸೂರು: ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ನಗರದ ಎಫ್‌ಟಿಎಸ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ಈ ಮಸೂದೆಯ ಪ್ರತಿಯನ್ನು ಹರಿದುಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಅಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಜನತಾದಳ(ಯು) ಮತ್ತು ತೆಲುಗುದೇಶಂ ಪಕ್ಷಗಳು ಸೇರಿದಂತೆ ದೇಶದ ಎಲ್ಲ ಜನತೆ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ದೇಶಾದ್ಯಂತ ಇರುವ ಎಲ್ಲ ವಕ್ಫ್ ಆಸ್ತಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಆಸ್ತಿಗಳಾಗಿವೆ. ಇವು ಯಾವುದೇ ರಾಜ್ಯಗಳ ಅಥವಾ ಕೇಂದ್ರ ಸರ್ಕಾರದ ಆಸ್ತಿಯಲ್ಲ. ಬಡ ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಳಿಗೆ ಇದೇ ಸಮುದಾಯದ ಮಹನೀಯರು ದಾನದ ರೂಪದಲ್ಲಿ ನೀಡಿದ ಆಸ್ತಿಯಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ಕೇವಲ ತನ್ನ ಮುಸ್ಲಿಂ ದ್ವೇಷದಿಂದ ವಕ್ಫ್ ತಿದ್ದುಪಡಿಗೆ ಮುಂದಾಗಿದೆ ಎಂದು ಕಿಡಿಕಾರಿದರು.
ಈ ತಿದ್ದುಪಡಿಯ ಪ್ರಕಾರ ಇಬ್ಬರು ಮುಸ್ಲಿಮೇತರರು ವಕ್ಫ್ ಮಂಡಳಿಯ ಸದಸ್ಯರಾಗುತ್ತಾರೆ. ಇದು ಹೇಗೆ ಸಾಧ್ಯ? ಹಾಗಾದರೆ ನೀವು ಮೈಸೂರಿನ ಚಾಮುಂಡಿಬೆಟ್ಟದ ಸಮಿತಿಯಲ್ಲಿ ಇಬ್ಬರು ಮುಸಲ್ಮಾನರಿಗೆ ಸದಸ್ಯರಾಗಲು ಅವಕಾಶ ನೀಡುತ್ತಿರಾ? ಎಂದು ಮಜೀದ್ ಪ್ರಶ್ನಿಸಿದರು.
ದೇಶದಲ್ಲಿ ಯಾವುದೇ ಕಾನೂನು ಜಾರಿ ಆಗಬೇಕಾದರೆ ಅದು ಜನರ ಬೇಡಿಕೆ ಆಗಿರಬೇಕು. ವಕ್ಫ್ ಕಾನೂನು ತಿದ್ದುಪಡಿ ಮಾಡುವಂತೆ ದೇಶದ ಯಾವೊಬ್ಬ ಮುಸಲ್ಮಾನರಾಗಲಿ, ಮುಸ್ಲಿಂ ಸಂಘ ಸಂಸ್ಥೆಗಳಾಗಲಿ ಅಥವಾ ಮುಸ್ಲಿಂ ಸಂಸದರು, ಶಾಸಕರು, ರಾಜ್ಯಸಭಾ ಸದಸ್ಯರಾಗಲಿ ಕೇಳಿಲ್ಲ. ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಸುನ್ನಿ ವಕ್ಫ್ ಬೋರ್ಡ್, ಶಿಯಾ ವಕ್ಫ್ ಬೋರ್ಡ್ ಸಹ ಈ ತಿದ್ದುಪಡಿಗೆ ಬೇಡಿಕೆ ಸಲ್ಲಿಸಿಲ್ಲ. ಹೀಗಿರುವಾಗ ಸರ್ಕಾರವು ಯಾವ ಆಧಾರದಲ್ಲಿ ಈ ತಿದ್ದುಪಡಿ ಮಾಡಲು ಮುಂದಾಗಿದೆ. ಏಕಪಕ್ಷೀಯ ನಿರ್ಧಾರ ಪ್ರಜಾಪ್ರಭುತ್ವದಲ್ಲಿ ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಪಾಲುದಾರರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರು ಯಾವುದೇ ಕಾರಣಕ್ಕೂ ಈ ಮಸೂದೆ ಜಾರಿಯಾಗಲು ಬಿಡಬಾರದು. ಆಂಧ್ರಪ್ರದೇಶದಲ್ಲಿ ಮುಸ್ಲಿಂ ವೋಟ್ ಶೇ.10ರಷ್ಟಿದೆ.
ಆದರೆ, ಬಿಜೆಪಿ ವೋಟ್ ಅಲ್ಲಿ ಕೇವಲ 1 ಪರ್ಸೆಂಟ್ ಮಾತ್ರವಿದೆ. ಅದೇ ರೀತಿ ಬಿಹಾರದಲ್ಲಿ ಮುಸ್ಲಿಂ ವೋಟ್ ಶೇ.16ರಷ್ಟಿವೆ. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಈ ಮಸೂದೆಯನ್ನು ಬೆಂಬಲಿಸಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಸಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟ ನಂಜಯ್ಯ, ಜಿಲ್ಲಾಧ್ಯಕ್ಷ ರಫತ್ ಖಾನ್ ಇತರರು ಇದ್ದರು.