ಜಿಲ್ಲೆ

ವಕ್ಫ್ ಕಾಯ್ದೆಯಿಂದ ನಮ್ಮ ಭೂಮಿ ರಕ್ಷಿಸೋಣ:ಬಿಜೆಪಿಯಿಂದ ಪ್ರತಿಭಟನೆ

ಹಾಸನ: ನಮ್ಮ ಭೂಮಿಯನ್ನು ವಕ್ಫ್ ಕಾಯ್ದೆಯಿಂದ ರಕ್ಷಿಸೋಣ. ನಮ್ಮ ಹಕ್ಕಿಗಾಗಿ ಸಂಘಟಿತ ಹೋರಾಟ ಮಾಡೋಣ ಎನ್ನುವ ಘೋಷಣೆಯೊಂದಿಗೆ ಬಿಜೆಪಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಶುಕ್ರವಾರ ಒಂದು ದಿನದ ಹೋರಾಟ ಮಾಡಿ ಸಂಜೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ರಾಜ್ಯಾದ್ಯಂತ ವಕ್ಫ್ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನಮ್ಮ ಭೂಮಿ ನಮ್ಮ ಹಕ್ಕು ಶೀರ್ಷಿಕೆಯಡಿ ಜನಜಾಗೃತಿ ಆಂದೋಲನವನ್ನು ಏರ್ಪಡಿಸಲಾಗಿದೆ. ನಮ್ಮ ನಮ್ಮ ಭೂಮಿಯ ಪಹಣಿಯನ್ನು ಪರೀಕ್ಷಿಸಿಕೊಂಡು ಮತ್ತೆ ಹೊಸ ಪಹಣಿ ತೆಗೆಸುವ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಸಿದ್ದರಾಮಯ್ಯ ಅವರ ಸರ್ಕಾರ ಜನಸಾಮಾನ್ಯರ ಬದುಕನ್ನು ಯಾವ ದಿಕ್ಕಿಗೆ ತೆಗೆದುಕೊಂಡು ಹೊರಟಿದೆ ಗೊತ್ತಿಲ್ಲ. ಒಂದು ಕಡೆ ಅವರು ಕೊಡುತ್ತಿರುವ ಯೋಜನೆಗಳನ್ನು ಸಮತೋಲನಕ್ಕೆ ತರಲಾಗದೆ ಹತ್ತು ಹಲವಾರು ಯೋಜನೆಗಳನ್ನು ವಿಲೀನಗೊಳಿಸಿ ಬರೀ ಕಣ್ಣು ಹೊರೆಸುವ ತಂತ್ರವನ್ನು ಮಾಡುತ್ತಿದೆ. ಈಗ ಜನಸಾಮಾನ್ಯರ, ರೈತರ ಆಸ್ತಿಗೆ ಕಣ್ಣು ಹಾಕಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದರೆ ಪಹಣಿ ತೆಗೆಸಿ ನೋಡಿದರೆ ಅವರ ಮೂಲ ಹಕ್ಕನ್ನು ಬಿಟ್ಟು ವಕ್ಫ್ ಹೆಸರು ಬರುತ್ತಿದೆ. ಹಿಂದು ರುದ್ರಭೂಮಿಗಳು ಎಲ್ಲ ವಕ್ಫ್ ಆಸ್ತಿಗಳಾಗಿವೆ. ಗೌರಿಕಟ್ಟೆ ಎನ್ನುವ ಪ್ರದೇಶ ಗೋರಿ ಕಟ್ಟೆಗಳಾಗಿವೆ. ಇಲ್ಲಿ ಒಂದು ಧರ್ಮ ಓಲೈಸುವುಕ್ಕಾಗಿ ಸಮಾಜವನ್ನು ಒಡೆಯುತ್ತಿದೆ. ರೈತರಿಗಾಗಿಯೇ ನಮ್ಮ ಭೂಮಿ ನಮ್ಮ ಹಕ್ಕು ಶೀರ್ಷಿಕೆಯಡಿ ಜನಜಾಗೃತಿ ಆಂದೋಲನವನ್ನು ಮಾಡಲಾಗುತ್ತಿದೆ. ಯಾರೆಲ್ಲಾ ಪಹಣಿ ಬದಲಾಗಿದೆ ಅವರಿಂದ ಮನವಿ ಸ್ವೀಕರಿಸಲಾಗುತ್ತಿದೆ. ಈಗಾಗಲೇ ನಾಲ್ಕೈದು ಪ್ರಕರಣಗಳು ಬೆಳಕಿಗೆ ಬಂದಿದ್ದು, ಮಠ ಮಾನ್ಯಗಳ ಆಸ್ತಿ ಕೂಡ ವಕ್ಫ್ ಗೆ ಸೇರಿರುವುದನ್ನು ಖಂಡಿಸುತ್ತೇವೆ. ಮುಂದೆ ಇದಕ್ಕೆ ನ್ಯಾಯ ದೊರಕದಿದ್ದರೇ ಇನ್ನಷ್ಟು ಉಗ್ರವಾದ ಹೋರಾಟ ಮಾಡಲಾಗುವುದು. ಮುಂದೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ರೈತರ ದೊಡ್ಡ ಪ್ರಮಾಣದಲ್ಲಿ ನ್ಯಾಯಾ ಸಿಗುವವರೆಗೂ ಜನಪ್ರತಿನಿಧಿಯೊಂದಿಗೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಮಾತನಾಡಿ, ಬ್ರಿಟಿಷರ ಆಡಳಿತ ಕಾಲದಲ್ಲಿ ಈ ವಕ್ಫ್ ಕಾಯ್ದೆ ಜಾರಿಗೆ ತಂದಿದ್ದು, ಅವರ ದರ್ಗಾ, ಮಸೀದಿಗಳನ್ನು ರಕ್ಷಣೆ ಮಾಡಬೇಕೆನ್ನುವುದು ಸರ್ಕಾರದ ಕರ್ತವ್ಯ. ಆದರೆ 1974ರಲ್ಲಿ ಕರಾಳ ದಿನದಲ್ಲಿ ತುರ್ತು ಪರಿಸ್ಥಿತಿ ಏರಿದ ದಿವಸವಾಗಿದೆ. ಈ ಕಾಯ್ದೆಗೆ ತಿದ್ದುಪಡಿ ತಂದರು. ಇದೆಲ್ಲಾ ವಕ್ಫ್ ಗೆ ಸೇರಿದೆ ಎಂದು ಎಲ್ಲ ಆಸ್ತಿಯನ್ನು ಪಟ್ಟಿ ಮಾಡಿಕೊಟ್ಟು ನೋಟಿಪೈ ಮಾಡಿದರು. ಎಲ್ಲರೂ ಹಸ್ತಕ್ಕೆ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಪಕ್ಷದವರು ಈ ವಕ್ಫ್ ಕಾಯ್ದೆ ತಿದ್ದುಪಡಿ ತಂದು ಇಂದು ಎಲ್ಲ ರೈತರು ಜಮೀನು ಇಲ್ಲದೆ ಇಡೀ ಗ್ರಾಮವನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ಬ್ರಿಟಿಷ್ ಕಾಲದಲ್ಲಿ ಭಾರತ ಬಿಟ್ಟು ತೊಲಗಿ ಎಂದು ಹೇಳಿದಂತೆ ಇಂದು ಊರು ಬಿಟ್ಟು ತೊಲಗಿ ನೀವು ಎಂದು ವಕ್ಫ್ ಕಾಯ್ದೆ ಹೇಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೆ ವೇಳೆ ನುಗ್ಗೇಹಳ್ಳಿ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಮಠಾಧೀಶರಾದ ವಿಜಯಕುಮಾರ ಸ್ವಾಮೀಜಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ರೇಣುಕುಮಾರ್, ಗಿರೀಶ್, ರೈತ ಮೋರ್ಚ ಅಧ್ಯಕ್ಷ ಬಿ.ಎಚ್. ನಾರಾಯಣಗೌಡ, ನಗರಾಧ್ಯಕ್ಷ ವೇಣುಕುಮಾರ್, ಎಸ್.ಡಿ. ಚಂದ್ರು, ವಿಜಯಲಕ್ಷ್ಮೀ ಅಂಜನಪ್ಪ, ವೇದಾವತಿ, ರಘು, ಚನ್ನಕೇಶವ, ಕುಮಾರ್ ಇತರರು ಉಪಸ್ಥಿತರಿದ್ದರು.