ಔರಾದ್: ರೈತರ ಜಮೀನು, ಹಿಂದು ಮಠ-ಮಂದಿರ, ಸಂರಕ್ಷಿತ ಸ್ಮಾರಕಗಳ ಆಸ್ತಿ, ಜಮೀನುಗಳನ್ನು ವಕ್ಫ್ ಮಂಡಳಿಗೆ ವರ್ಗಾವಣೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಪಟ್ಟಣದ ಎಪಿಎಂಸಿ ವೃತ್ತ ಬಳಿ ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನದಾತರ ಭೂಮಿಯನ್ನು ಯಾವುದೇ ಮಾಹಿತಿ ಇಲ್ಲದೆ ವಕ್ಫ್ ಬೋರ್ಡ್ಗೆ ಸೇರಿಸಿ ಆತಂಕ ಸೃಷ್ಟಿಸಿರುವುದು ಸರಿಯಲ್ಲ. ರೈತರಿಗೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಎಚ್ಚರಿಸಿದರು.
ಸಮಾಜ ಸೇವಕ ಗುರುನಾಥ ವಡ್ಡೆ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರ ಭೂಮಿ ವಕ್ಫ್ ಬೋರ್ಡ್ ಕಬ್ಜಾ ಮಾಡಲು ಹೊರಟಿರುವುದು ಖಂಡನೀಯ. ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು, ಒಂದು ತಾಲೂಕಿನಲ್ಲಿ ೩ ಸಾವಿರ ಎಕರೆ ಜಮೀನು ವಕ್ಫ್ ಆಸ್ತಿಗೆ ಸೇರಿಸಿದ್ದಾರೆ. ಆಸ್ತಿ ಕಬಳಿಸುವ ವಕ್ಫ್ ಕಾಯ್ದೆ ರದ್ದುಪಡಿಸಿ ರೈತರ ಬೆನ್ನೆಲುಬು ಆಗಿ ನಿಲ್ಲಬೇಕು ಎಂದು ಹೇಳಿದರು.
ಯುವ ಮುಖಂಡ ಬಸವರಾಜ ಹಳ್ಳೆ ಮಾತನಾಡಿದರು. ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮುಖಂಡ ಕಲ್ಲಪ್ಪ ದೇಶಮುಖ, ಡಾ.ಧನರಾಜ ರಾಗಾ, ಶಿವರಾಜ ಶೆಟಕಾರ, ಬಸವರಾಜ ಶೆಟಕಾರ, ವಿಎಚ್‌ಪಿ ಅಧ್ಯಕ್ಷ ರಾಜಕುಮಾರ ನಾಯಕ, ಅಶೋಕ ಶೆಂಬೆಳ್ಳಿ, ಅನಿಲ ಮೇತ್ರೆ, ಸೊನು ರಾಠೋಡ್, ಮಲ್ಲಿಕಾರ್ಜುನ ಟೇಕರಾಜ, ಮಹಾದೇವ ಸಿಂಧೆ ಇತರರಿದ್ದರು.