ಜಿಲ್ಲೆ

ವಕ್ಫ್ ಆಸ್ತಿ ವಿವಾದ ಬಗೆಹರಿಸಲು ಆಗ್ರಹ

Hassan - Mohan Kanthur

 ಹಾಸನ: ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುವ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸಿರುವ ವಕ್ಫ್ ಆಸ್ತಿ ವಿವಾದವನ್ನು ಬಗೆ ಹರಿಸಲು ರಾಜ್ಯ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ರಮೇಶ್ ರಾಜು ಒತ್ತಾಯಿಸಿದರು.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಪಹಣಿಯಲ್ಲಿ ಅವರ ಹೆಸರು ಬದಲು ವಕ್ಫ್ ಮಂಡಳಿ ಹೆಸರು ಬರುತ್ತಿದೆ. ಇದು ದೊಡ್ಡ ರಾದ್ಧಾಂತ, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ರೈತರ ಆರ್‌ಟಿಸಿ ಕಾಲಂ ನ.11 ರಲ್ಲಿ ವಕ್ಫ್ ಬೋರ್ಡ್‌ನ ಹೆಸರು ಸೇರ್ಪಡೆಯಾಗಿರುವ ಬಗ್ಗೆ ರೈತ ಸಮುದಾಯ ಆತಂಕಗೊಂಡಿದೆ.ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳು, ನಾಟಕ ಮಾಡುವುದನ್ನು ಬಿಟ್ಟು, ತುರ್ತು ಸಚಿವ ಸಂಪುಟ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರಾಜ್ಯ ಯಾವುದೇ ರೈತನ ಆಸ್ತಿ ಮೇಲೆ ವಕ್ಫ್ ಹಾಗೂ ಇತರೆ ಯಾವುದೇ ಸಂಸ್ಥೆಗಳ ಹೆಸರು ಬರದಂತೆ ನೋಡಿಕೊಳ್ಳಬೇಕು. ಅನ್ಯಾಯವಾದ ರೈತರು ಕಾನೂನು ಹೋರಾಟ ಮಾಡಬಹುದು, ಅದನ್ನು ಬಿಟ್ಟು ವಕ್ಫ್ ಮಂಡಳಿಗೆ ಹೋಗಿ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಈ ಸಮಸ್ಯೆಯನ್ನು ರಾಜ್ಯ ಸರ್ಕಾರ ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದರೆ ಸಮಸ್ಯೆ ಬಗೆ ಹರಿಯುವವರೆಗೂ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತರೂ ಸಹ ತಮ್ಮ ಭೂಮಿಯ ಪಹಣಿಯಲ್ಲಿ ಯಾರ ಹೆಸರು ಬರುತ್ತಿದೆ ಎಂಬುದನ್ನು ಕೂಡಲೇ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕಾಳೇಗೌಡ, ಸರೋಜಮ್ಮ, ಮಧು, ಕುಮಾರಸ್ವಾಮಿ, ಮಲ್ಲಪ್ಪ, ಚಂದ್ರಶೇಖರ್ ಇದ್ದರು.